ಮುಲ್ಕಿ : ತುಳುವ ಮಹಾಸಭೆ ಮುಲ್ಕಿ ವಲಯ ಹಾಗೂ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಆಶ್ರಯದಲ್ಲಿ ‘ತುಳು ಪಜ್ಜೆ’ ಕಾರ್ಯಕ್ರಮ ಅ.9ರಂದು ಬೆಳಿಗ್ಗೆ 10 ಗಂಟೆಗೆ ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ‘ಅರುಣಾಬ್ಬನ ಭಾರತಕಾವ್ಯೊದ ಪೊರ್ಲು’ ವಿಷಯದ ಕುರಿತು ಉಪನ್ಯಾಸ ನಡೆಯಲಿದ್ದು, ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕರಾದ ಮಹಿ ಮುಲ್ಕಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ‘ತುಳು ಭಾಷೆ ಅಧಿಕೃತ ಸ್ಥಾನಮಾನ, ನನ ದುಂಬುದ ಪಜ್ಜೆಲು’ ವಿಷಯದ ಕುರಿತು ಸಂವಾದ ನಡೆಯಲಿದ್ದು, ನಮ್ಮ ತುಳುನಾಡು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಜಿ.ವಿ.ಎಸ್. ಉಳ್ಳಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11.30ರಿಂದ ‘ವಿಶ್ವ ತುಳು ಲಿಪಿ ದಿನಾಚರಣೆ’ ಕಾರ್ಯಕ್ರಮ ನಡೆಯಲಿದೆ. ಸರಕಾರಿ ಪದವಿ ಪೂರ್ವ ಕಾಲೇಜು ಮುಲ್ಕಿಯ ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ, ತುಳು ವರ್ಲ್ಡ್ ಫೌಂಡೇಶನ್ ಕಟೀಲ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ನಿಶ್ಚಿತ್ ರಾಮಕುಂಜ, ತುಳುವ ಮಹಾಸಭೆ ಮುಲ್ಕಿ ವಲಯದ ಅಧ್ಯಕ್ಷ ಉದಯ ಪೂಂಜಾ ತಾರಿಪಾಡಿಗುತ್ತು ಹಾಗೂ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ತುಳು ಲಿಪಿ ನಿರ್ದೇಶಕ ಮತ್ತು ಸೊಲ್ಮೆಲು ಸ್ಟುಡಿಯೋ ಸ್ಥಾಪಕ ನಿಶಾಂತ್ ರತ್ನಾಕರ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಹ್ಲಾದ್ ತಂತ್ರಿ ರಚಿಸಿರುವ ‘ತುಳು ವರ್ಣಾಮೃತ’ ಪುಸ್ತಕ ಹಾಗೂ ‘ಪುಣ್ಣಮೆದ ಬೊಲ್ಪು’ ತುಳು ಮಾಸಿಕ ಪತ್ರಿಕೆ ಬಿಡುಗಡೆಗೊಳ್ಳಲಿದೆ.
ತುಳುವ ಮಹಾಸಭೆ ಮುಲ್ಕಿ ವಲಯದ ಸಂಚಾಲಕ ಮಹಿ ಮುಲ್ಕಿ ಹಾಗೂ ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.

