ಅಂಚೆ ಇಲಾಖೆಯ ಪರೀಕ್ಷೆಯಲ್ಲಿ ಮೂಡುಬಿದಿರೆಯ ವಿಜಯಕುಮಾರ್, ವಾಣಿಶ್ರೀ ಆಯ್ಕೆ

0
11

ಮೂಡುಬಿದಿರೆ: ಅಂಚೆ ಇಲಾಖೆಯು ಕಳೆದ ಜೂನ್‌ನಲ್ಲಿ ನಡೆಸಿದ ಪದೋನ್ನತಿ ಪರೀಕ್ಷೆಯಲ್ಲಿ ಮೂಡುಬಿದಿರೆ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯಕುಮಾರ್ ಹಾಗೂ ವಾಣಿಶ್ರೀ ಆಯ್ಕೆಯಾಗಿದ್ದಾರೆ.

ಸ್ಥಳೀಯ ಹಂಡೇಲು ನಿವಾಸಿ ವಿಜಯಕುಮಾರ್ ಅವರು ಮೂಡಬಿದಿರೆ ಅಂಚೆ ಕಚೇರಿಯಲ್ಲಿ ಅಂಚೆ ವಿತರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಮಂಗಳೂರಿನ ಆರ್‌ಎಂಎಸ್ ಕ್ಯೂ ವಿಭಾಗದಲ್ಲಿ ವಿಂಗಡಣಾ ಸಹಾಯಕ (ಎಸ್‌ಎ) ಹುದ್ದೆಗೆ ಆಯ್ಕೆಯಾಗಿದ್ದಾರೆ. ವಾಣಿಶ್ರೀ ಅವರು ಅಂಚೆ ಸಹಾಯಕಿಯಾಗಿ ಪುತ್ತೂರು ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.

ಪದೋನ್ನತಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಸ್ಥಳೀಯ ಪ್ರತಿಭೆಗಳಾದ ವಿಜಯಕುಮಾರ್ ಹಾಗೂ ವಾಣಿಶ್ರೀ ಅವರನ್ನು ಅಭಿನಂದಿಸುವ ಕಾರ್ಯಕ್ರಮವು ಶುಕ್ರವಾರ ಮೂಡಬಿದಿರೆ ಅಂಚೆ ಕಚೇರಿಯಲ್ಲಿ ನಡೆಯಿತು. ಪ್ರಭಾರ ಅಂಚೆಪಾಲಕ ಗುರುಪ್ರಸಾದ್ ಕೆ.ಎಸ್. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.