ಮಕ್ಕಳನ್ನೇ ಆಸ್ತಿ ಮಾಡಿಕೊಳ್ಳಿ-ಶೈಲಾ ಡಿಸೋಜ
ಮೂಡುಬಿದಿರೆ: ಹೆತ್ತವರು ತಮ್ಮ ಮಕ್ಕಳು ಮಾಡಿಕೊಳ್ಳುವ ಆಸ್ತಿಯ ಬಗ್ಗೆ ಆಸಕ್ತಿ ವಹಿಸದೆ ಮಕ್ಕಳನ್ನೇ ತಮ್ಮ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಮೈಟ್ ಇಂಜಿನಿಯರಿಂಗ್ ಕಾಲೇಜಿನ ವೃತ್ತಿಪರ ಸಲಹೆಗಾರರಾದ ಶೈಲಾ ಡಿಸೋಜ ನುಡಿದರು.
ಲಯನ್ಸ್ ಕ್ಲಬ್ ಮೂಡುಬಿದಿರೆ ವತಿಯಿಂದ ಇಲ್ಲಿನ ಕೀರ್ತಿನಗರದ ಹರಿಭವ ಸಭಾಂಗಣದಲ್ಲಿ ನ. 15ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳ ಪ್ರಯತ್ನಗಳ ಹಿಂದೆ ತಾಯಿಯ ಶಕ್ತಿ ಇರುತ್ತದೆ. ಪ್ರತಿಭೆಗಳ ಅನಾವರಣಕ್ಕೆ ಇಂತಹ ವೇದಿಕೆಗಳನ್ನು ಕಲ್ಪಿಸಿಕೊಟ್ಟಾಗ ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂದರು.
ಬಹುಮಾನಗಳ ಪ್ರಾಯೋಜಕಿ ಸಿಂಚನಾ ಚಿಟ್ಸ್ ಪ್ರೈ.ಲಿ.ನ ನಿರ್ದೇಶಕಿ ಸಂಗೀತಾ ಎಂ. ಪ್ರಭು ಅವರು ಮಾತನಾಡಿ ಹಿಂದಿನ ಮಕ್ಕಳಿಗೆ ಒತ್ತಡ ಮತ್ತು ಮಾನಸಿಕ ಕಿರುಕುಳ ಮುಂತಾದ ಪದಗಳೇ ಗೊತ್ತಿರಲಿಲ್ಲ. ಇಂದು ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ನೆಪವಾಗಿಟ್ಟುಕೊಂಡು ಅತೀ ಚಿಕ್ಕ ವಯಸ್ಸಿನಲ್ಲಿಯೇ ಅವರ ಮೇಲೆ ಹೇರುವ ಒತ್ತಡ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿದೆ ಎಂದರಲ್ಲದೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂಡುಬಿದಿರೆ ಲಯನ್ಸ್ ಕ್ಲಬ್ ವರ್ಷಂಪ್ರತಿ ಮಕ್ಕಳ ದಿನಾಚರಣೆಯ ಮೂಲಕ ದಾಖಲೆ ಸಂಖ್ಯೆಯಲ್ಲಿ ಪುಟಾಣಿ ಮಕ್ಕಳನ್ನು ಒಗ್ಗೂಡಿಸಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ ಪ್ರತಿಯೊಂದು ಮಗುವೂ ದೇಶದ ಸಂಪತ್ತಾಗಿದ್ದು ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ, ಶಿಸ್ತು, ಆತ್ಮವಿಶ್ವಾಸ ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಕಾರ್ಯ ಲಯನ್ಸ್ ನಂತಹ ಸಮಾಜಸೇವಾ ಸಂಸ್ಥೆಗಳಿಂದ ನಿರಂತರ ನಡೆಯಬೇಕು ಎಂದು ಆಶಿಸಿದರು.
ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಹರ್ಷ, ಕೋಶಾಧಿಕಾರಿ ಅರುಣ್ ಡಿಸಿಲ್ವ, ಲಿಯೋ ಕ್ಲಬ್ ಅಧ್ಯಕ್ಷೆ ಶಿವಾನಿ ದಿನೇಶ್, ಕಾರ್ಯದರ್ಶಿ ರಾಹುಲ್ ಪಿ. ಹೆಗ್ಡೆ ಉಪಸ್ಥಿತರಿದ್ದರು. ಆಲ್ವಿನ್ ಮಿನೇಜಸ್ ಧ್ವಜವಂದನೆ ನೆರವೇರಿಸಿದರು. ಓಸ್ವಾಲ್ಡ್ ಡಿಕೋಸ್ತ ನೀತಿ ಸಂಹಿತೆ ಪಠಿಸಿದರು. ರಿಚರ್ಡ್ ಕರ್ಡೋಜಾ ಸ್ವಾಗತಿಸಿದರು. ದಯಾನಂದ ನಿರೂಪಿಸಿದ ಕಾರ್ಯಕ್ರಮದಲ್ಲಿ ಹರ್ಷ ವಂದಿಸಿದರು.

