ಕಾರ್ಕಳ : ಪ್ರಸ್ತುತಿ ಪಬ್ಲಿಷರ್ಸ್ & ಸರ್ವಿಸ್ ವತಿಯಿಂದ ಪ್ರಕಟವಾಗುವ ‘ಕರಾವಳಿನಾಡಿ’ ವಾರಪತ್ರಿಕೆಯ ಮೂಲಕ ಕಾರ್ಕಳ–ಹೆಬ್ರಿ ತಾಲೂಕಿನ 150 ಸರಕಾರಿ ಶಾಲೆಗಳ ಸುಮಾರು 10 ಸಾವಿರ ಮಕ್ಕಳಿಗೆ ದಾನಿಗಳ ನೆರವಿನಿಂದ ಉಚಿತವಾಗಿ ವಾರಪತ್ರಿಕೆ ವಿತರಿಸುವ ‘ಮಗುವಿನ ಮನ–ಮನೆಗೊಂದು ಪತ್ರಿಕೆ’ ವಿಶೇಷ ಓದು ಮಹಾ ಅಭಿಯಾನಕ್ಕೆ ಆಗಸ್ಟ್ 29ರಂದು ಚಾಲನೆ ದೊರೆಯಲಿದೆ.
ಜ್ಞಾನದಾಸೋಹಕ್ಕೆ ಇ–ಚಾಲನೆ ಕಾರ್ಯಕ್ರಮವು ಆಗಸ್ಟ್ 29, ಶನಿವಾರ ಮಧ್ಯಾಹ್ನ 2 ಗಂಟೆಗೆ ಕಾರ್ಕಳದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಆವರಣದಲ್ಲಿ ನಡೆಯಲಿದೆ.
ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪತ್ರಿಕೆ ಓದು ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು ಮೊದಲ ಪ್ರತಿಯನ್ನು ಹಸ್ತಾಂತರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಿಪಿನ್‌ಚಂದ್ರಪಾಲ್ ನಕ್ರೆ ಅವರ ‘ನನ್ನ ಹೃದಯದ ಹಾಡು’ ಕವನ ಸಂಕಲನವನ್ನು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಬಿಡುಗಡೆಗೊಳಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಅವರು ‘ಮಕ್ಕಳ ವಿಶೇಷ ಪುಟ’ವನ್ನು ಅನಾವರಣಗೊಳಿಸಲಿದ್ದಾರೆ. ‘ಕರಾವಳಿನಾಡಿ’ ಸಂಪಾದಕಿ ಅಶ್ವಿನಿ ಹೆಚ್. ನಂದಳಿಕೆ ಅವರ ಉಪಸ್ಥಿತಿಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನಂದಳಿಕೆ ಅವರ ‘ಇಂತಿರು’ ಚೊಚ್ಚಲ ಕವನ ಸಂಕಲನ ಬಿಡುಗಡೆಯಾಗಲಿದೆ.ಕಾರ್ಯಕ್ರಮದಲ್ಲಿ ‘ನನ್ನೂರು–ನನ್ನ ಜಗತ್ತು’ ವಿಭಾಗದಲ್ಲಿ ‘ರೆಂಜಾಳ’ ಗ್ರಾಮಸ್ಟೋರಿಗೆ ಚಾಲನೆ ನೀಡಲಾಗುವುದು. ಮಹಾಮಸ್ತಕಾಭಿಷೇಕ ವಿಶೇಷ ವಾರದ ಸರಣಿಗೆ ನಿವೃತ್ತ ಶಿಕ್ಷಕ ಮುನಿರಾಜ್ ರೆಂಜಾಳ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಮಂಜುನಾಥ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್., ಅಜೆಕಾರ್ ಪದ್ಮಗೋಪಾಲ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಪೆರ್ವಾಜೆ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಪೂಜಾರಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಕೆ. ದಿನೇಶ್ ಮಡಿವಾಳ ಸೇರಿದಂತೆ ಹಲವು ಗಣ್ಯರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾಧಕರಿಗೆ ಸನ್ಮಾನ
ಸಮಾರಂಭದಲ್ಲಿ ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಕಮಲಾಕ್ಷ ಕಾಮತ್ (ಬಹರೇನ್), ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಹಿರಿಯ ಪತ್ರಕರ್ತ ಬಿಪಿನ್‌ಚಂದ್ರಪಾಲ್ ನಕ್ರೆ, ‘ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್’ನ ಅವಿನಾಶ್ ಶೆಟ್ಟಿ, ಯುವ ವಕೀಲೆ ಸಿಲ್ವಿಯಾ ಕೊರ್ಡೆರೊ ಅವರನ್ನು ಸನ್ಮಾನಿಸಲಾಗುವುದು.
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು, ಜ್ಞಾನವನ್ನು ವಿಸ್ತರಿಸುವುದು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಓದು ಸಾಮಗ್ರಿ ಲಭ್ಯವಾಗುವಂತೆ ಮಾಡುವುದು ಈ ವಿಶೇಷ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ದಾನಿಗಳ ಸಹಕಾರದೊಂದಿಗೆ ಕಾರ್ಕಳ–ಹೆಬ್ರಿ ತಾಲೂಕಿನ 150 ಸರಕಾರಿ ಶಾಲೆಗಳ ಸುಮಾರು 10 ಸಾವಿರ ಮಕ್ಕಳಿಗೆ ಉಚಿತವಾಗಿ ವಾರಪತ್ರಿಕೆ ತಲುಪಿಸುವ ಮಹತ್ವದ ಪ್ರಯತ್ನ ಇದಾಗಿದೆ. ಕಾರ್ಯಕ್ರಮಕ್ಕೆ ‘ಕರಾವಳಿನಾಡಿ’ ಪ್ರಧಾನ ಸಂಪಾದಕ ಬಾಲಕೃಷ್ಣ ಭೀಮಗುಳಿ, ಸಂಪಾದಕಿ ಅಶ್ವಿನಿ ಹೆಚ್. ನಂದಳಿಕೆ ಹಾಗೂ ವಿಭಾಗಗಳ ಮುಖ್ಯಸ್ಥರಾದ ಯೋಗೀಶ್ ನಿಟ್ಟೆ, ಸ್ನೇಹಾ ಬೈಲೂರು, ಸೆಲೋನಿಯಾ ಸಂತೆಕಟ್ಟೆ, ಭವ್ಯಾ ಅಕ್ಷತ್, ಗಂಗಾಧರ್, ‘ತುಳುನಾಡ ತುಡರ್’ ಕೀರ್ತಿ ಕಾರ್ಕಳ ಹಾಗೂ ‘ಕರಾವಳಿನಾಡಿ’ ತಂಡದವರು ಸಿದ್ಧತೆ ನಡೆಸುತ್ತಿದ್ದಾರೆ.

