ಹರಿಯಾಣ: ಭಾರತೀಯ ವಾಯುಪಡೆಯ ಹೆಮ್ಮೆಯ ಯೋಧ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಅವರು ಇನ್ನು ನೆನಪು ಮಾತ್ರ. ಹರಿಯಾಣದ ಅವರ ಹುಟ್ಟೂರಿನಲ್ಲಿ ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ತ್ರಿವರ್ಣ ಧ್ವಜದಲ್ಲಿ ಹೊದಿಕೆಯಿದ್ದ ಸಿದ್ಧಾರ್ಥ್ ಅವರ ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರು, ಸ್ನೇಹಿತರು ದುಃಖ ಸಾಗರದಲ್ಲಿ ಮುಳುಗಿದ್ದರು.
ಮಾರ್ಚ್ 31 ರಂದು ನಿಶ್ಚಿತಾರ್ಥವಾಗಿದ್ದ ಸಿದ್ಧಾರ್ಥ್ ಅವರ ನಿಶ್ಚಿತ ವಧು ಸೋನಿಯಾ ಯಾದವ್ ಅವರ ದುಃಖ ಹೇಳತೀರದು. ತಮ್ಮ ಪ್ರೀತಿಯ ಬಂಧನ ಅರ್ಧದಲ್ಲೇ ಮುರಿದುಬಿದ್ದರೂ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ತಮ್ಮ ಭಾವಿ ಪತಿಯ ಬಗ್ಗೆ ಅವರಿಗೆ ಹೆಮ್ಮೆ ಇತ್ತು. “ಬೇಬಿ, ನೀನು ನನ್ನನ್ನು ಕರೆದುಕೊಂಡು ಹೋಗಲು ಬರಲಿಲ್ಲ,” ಎಂದು ಅವರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. “ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರ ಕರ್ತವ್ಯ ನಿಷ್ಠೆ ಅದ್ಭುತವಾಗಿತ್ತು,” ಎಂದು ಸೋನಿಯಾ ತಮ್ಮ ದುಃಖವನ್ನು ಹಂಚಿಕೊಂಡರು. ಇವರಿಬ್ಬರ ವಿವಾಹವು ಇದೇ ವರ್ಷದ ನವೆಂಬರ್ 2 ರಂದು ನಡೆಯಬೇಕಿತ್ತು.
ವರದಿಗಳ ಪ್ರಕಾರ, ಸಿದ್ಧಾರ್ಥ್ ಅವರು ಏಪ್ರಿಲ್ 2 ರಂದು ಗುಜರಾತ್‌ನ ಜಾಮ್‌ನಗರದ ಬಳಿ ನಡೆದ ವಾಡಿಕೆಯ ತರಬೇತಿ ಹಾರಾಟದ ವೇಳೆ ಜಾಗ್ವಾರ್ ಫೈಟರ್ ಜೆಟ್ ಪತನಗೊಂಡ ಪರಿಣಾಮವಾಗಿ ಮೃತಪಟ್ಟರು. ಜಾಮ್‌ನಗರ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನವು ಸುವರ್ದಾ ಗ್ರಾಮದ ಬಳಿ ರಾತ್ರಿ 9:30 ರ ಸುಮಾರಿಗೆ ಪತನಗೊಂಡಿತು. ವಿಮಾನದಲ್ಲಿದ್ದ ಮತ್ತೊಬ್ಬ ಪೈಲಟ್ ಸುರಕ್ಷಿತವಾಗಿ ಹೊರಬಂದರೂ, ಸಿದ್ಧಾರ್ಥ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರಿ ಸ್ಫೋಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು, ದಟ್ಟವಾದ ಹೊಗೆಯ ನಡುವೆ ಸಿದ್ಧಾರ್ಥ್ ಅವರ ದೇಹವನ್ನು ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ದುರಂತದ ಕುರಿತು ಭಾರತೀಯ ವಾಯುಪಡೆಯು ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ತಾಂತ್ರಿಕ ದೋಷದಿಂದ ವಿಮಾನವು ಪತನಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.