
ವಿವೇಕಾನಂದ ಪದವಿಪೂರ್ವ ಕಾಲೇಜಿನ ಷಷ್ಟ್ಯಬ್ದಿ ಸಂಭ್ರಮಕ್ಕೆ ತೆರೆ | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ದತ್ತಿನಿಧಿ ಬಹುಮಾನ ವಿತರಣೆ
ಪುತ್ತೂರು : ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗದೆ, ಜ್ಞಾನ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ನಿಜವಾದ ಉದ್ದೇಶ ಬೌದ್ಧಿಕ ಸಾಮರ್ಥ್ಯದೊಂದಿಗೆ ದೈಹಿಕ ಸಾಮರ್ಥ್ಯ, ಸೃಜನಶೀಲತೆ ಮತ್ತು ಜೀವನ ಕೌಶಲಗಳನ್ನು ವೃದ್ಧಿಸುವುದಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವೂ ವಿದ್ಯಾರ್ಥಿಗಳ ಬದುಕಿಗೆ ಅತ್ಯಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಹಾಗೂ ಉದ್ಯಮಿ ಸೂರಜ್ ಕುಮಾರ್ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ 60ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ವಕ್ತಾರರಾಗಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಭಿನ್ನ ಪ್ರತಿಭೆಗಳಿದ್ದು, ಸಂಗೀತ, ಕ್ರೀಡೆ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಪರಿಶ್ರಮ, ಜವಾಬ್ದಾರಿ ಮತ್ತು ದೇಶಪ್ರೇಮದ ಮನೋಭಾವ ಬೆಳೆಸಬೇಕು. ಭಾರತದ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ, ವೈಜ್ಞಾನಿಕ ಚಿಂತನೆ, ಕೌಶಲಾಭಿವೃದ್ಧಿ ಹಾಗೂ ಯುವಶಕ್ತಿಯ ಸದ್ಬಳಕೆ ಅತ್ಯಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಹ್ಯಾಂಡ್ ಆಂಡ್ ಮೈಕ್ರೋವಾಸ್ಕ್ಯುಲರ್ ಸರ್ಜನ್ ಹಾಗೂ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಡಾ. ಶ್ರುತಿಕಾಂತ್ ಎಸ್. ಮಾತನಾಡಿ, ಪಿಯು ಹಂತದಲ್ಲಿರುವಾಗಲೇ ಭವಿಷ್ಯದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಿರದಿದ್ದರೂ ಪ್ರಸ್ತುತ ಕ್ಷಣದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಮುಖ್ಯ. ಪ್ರತಿಭೆ ಆರಂಭದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾದರೆ, ನಿರಂತರ ಪರಿಶ್ರಮ, ಛಲ, ಆಸಕ್ತಿ ಮತ್ತು ಆತ್ಮವಿಶ್ವಾಸ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಸೋಲು ಪ್ರಯತ್ನದ ಅಂತ್ಯವಲ್ಲ; ಅದರಿಂದ ಪಾಠ ಕಲಿತು ಮತ್ತೆ ಪ್ರಯತ್ನಿಸಿದಾಗ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಮಾತನಾಡಿ, ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಉದ್ದೇಶದಿಂದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಕಳೆದ 60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಮೌಲ್ಯಾಧಾರಿತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದ ಸಂಸ್ಥೆಯು ಇನ್ನಷ್ಟು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂ. ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ 60ನೇ ವರ್ಷಾಚರಣೆಯ ಸಮಾರೋಪದ ಅಂಗವಾಗಿ ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಎ.ವಿ. ನಾರಾಯಣ್ ಅವರು ಷಷ್ಟ್ಯಬ್ದ ಹೆಗ್ಗುರುತಿನ ಲಾಂಛನಕ್ಕೆ ಗೌರವ ಸಮರ್ಪಿಸಿದರು.
ಸಭೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಬೋಧ್ ಶೆಟ್ಟಿ ಎಂ., ವಿವೇಕಾನಂದ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಲೇಜಿನ ಶೈಕ್ಷಣಿಕ ಸಂಯೋಜಕ ಶ್ರೀವತ್ಸ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ಕವಿತಾ ವಂದಿಸಿದರು. ಡಾ. ಶ್ರುತಿ ಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
