ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ‘ಮಹಾವೀರ ಫೆಸ್ಟ್–2026’ ಉದ್ಘಾಟನೆ | ಅಂತರಕಾಲೇಜು ಸ್ಪರ್ಧಾಕೂಟಕ್ಕೆ ಚಾಲನೆ
ಮೂಡುಬಿದಿರೆ : ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರ ಜೊತೆಗೆ ಜೀವನದ ಗುರಿಯನ್ನು ನಿರ್ಧರಿಸಲು ಮಾರ್ಗದರ್ಶನ ನೀಡುತ್ತದೆ. ಶಿಕ್ಷಣವು ಜ್ಞಾನದೊಂದಿಗೆ ಶಿಸ್ತು ಮತ್ತು ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಪದವಿಪೂರ್ವ ಹಂತವು ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸುವ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿಯೇ ಸ್ಪಷ್ಟ ಗುರಿಯನ್ನು ರೂಪಿಸಿಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಮಂಗಳೂರಿನ ಸಿಂಚನಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ಶಾಖಾ ವ್ಯವಸ್ಥಾಪಕ ಹಾಗೂ ಶ್ರೀ ಮಹಾವೀರ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂದೀಪ್ ಕುಮಾರ್ ಹೇಳಿದರು.
ಅವರು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಹಾಗೂ ವಿಜ್ಞಾನ, ವಾಣಿಜ್ಯ, ಐಟಿ ಮತ್ತು ಮಾನವಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಅಂತರಕಾಲೇಜು ಸ್ಪರ್ಧಾಕೂಟ ‘ಮಹಾವೀರ ಫೆಸ್ಟ್–2026’ ಅನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನಗತ್ಯ ಮನರಂಜನೆಗೆ ಹೆಚ್ಚು ಸಮಯ ವ್ಯಯಿಸದೆ ಶಿಕ್ಷಣಕ್ಕೆ ಆದ್ಯತೆ ನೀಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ‘ಮಹಾವೀರ ಫೆಸ್ಟ್–2026’ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಕ್ರಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಯಾನಂದ ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಮಾನಗಳ ಕುರಿತು ನಿರಂತರವಾಗಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಸೃಜನಶೀಲತೆ, ಭಾಷಣ ಕಲೆ ಹಾಗೂ ಸಂವಹನ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ ಎಂದರು. ಇಂತಹ ಪ್ರತಿಭಾನ್ವೇಷಣೆಯ ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ಕಾರ್ಯವನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಅಧ್ಯಾಪಕ ಸಂಯೋಜಕರಾದ ಡಾ. ಹರೀಶ್, ಗೀತಾ ರಾಮಕೃಷ್ಣ, ಶ್ರುತಿ ಎಸ್. ಡಾಂಗೆ, ನಿಕ್ಷಿತಾ ಹಾಗೂ ವಿದ್ಯಾರ್ಥಿ ನಾಯಕ ಕಿರ್ತನ್, ವಿದ್ಯಾರ್ಥಿ ಸಂಯೋಜಕರಾದ ವನಿತಾ, ಮರಿಯಮ್ಮ, ಶೋಧನ್ ಮತ್ತು ಪ್ರಜ್ವಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮನೀಷಾ ಕಾರ್ಯಕ್ರಮ ನಿರೂಪಿಸಿದರು. ಸ್ವಪ್ನಾ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಅಂತರಕಾಲೇಜು ಸ್ಪರ್ಧಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

