ಕೊರೋನಾ ಬಳಿಕ ಜಾಗತಿಕವಾಗಿ ಆರೋಗ್ಯ ಭೀತಿಗಳು ಕಡಿಮೆಯಾಗುತ್ತಿದ್ದರೂ, ಇದೀಗ ‘ಎಬೋಲಾ’ ವೈರಸ್ ಕುರಿತು ಆತಂಕ ಮತ್ತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಎಬೋಲಾ ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಎಸ್‌ಒಪಿ (SOP) ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವೂ ಎಚ್ಚರಿಕೆಯಿಂದ ಕ್ರಮ ಕೈಗೊಂಡಿದೆ.
ರಾಜ್ಯ ಆರೋಗ್ಯ ಇಲಾಖೆ ತುರ್ತು ಸಿದ್ಧತೆಗಳನ್ನು ಆರಂಭಿಸಿದ್ದು, ಸಂಶಯಾಸ್ಪದ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ಆಸ್ಪತ್ರೆಗಳು, ಐಸೊಲೇಶನ್ ಕೇಂದ್ರಗಳು ಹಾಗೂ ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ.
ರಾಜ್ಯದಲ್ಲಿ ವಿಶೇಷ ಆಸ್ಪತ್ರೆಗಳು ಮತ್ತು ಐಸೊಲೇಶನ್ ಕೇಂದ್ರಗಳು ಸಿದ್ಧ
ಎಬೋಲಾ ಚಿಕಿತ್ಸೆಗೆ ಮತ್ತು ಐಸೊಲೇಶನ್ ವ್ಯವಸ್ಥೆಗೆ ರಾಜ್ಯದ ಪ್ರಮುಖ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ:
- ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ, ಬೆಂಗಳೂರು (ಐಸೊಲೇಶನ್ ಕೇಂದ್ರ)
- ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಬೆಂಗಳೂರು
- ಶ್ರೀ ನಿವಾಸ ಪೋರ್ಟ್ ಆಸ್ಪತ್ರೆ, ಮಂಗಳೂರು (ಐಸೊಲೇಶನ್ ಕೇಂದ್ರ)
- ವೆನ್ಲಾಕ್ ಆಸ್ಪತ್ರೆ, ಮಂಗಳೂರು
ಈ ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್‌ಗಳು, ಅಗತ್ಯ ಔಷಧಗಳು, ಪರೀಕ್ಷಾ ಸೌಲಭ್ಯಗಳು ಮತ್ತು ಲ್ಯಾಬ್ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತಿದೆ. ಜೊತೆಗೆ ತುರ್ತು ಪರಿಸ್ಥಿತಿಗೆ ‘ರ್ಯಾಪಿಡ್ ರೆಸ್ಪಾನ್ಸ್ ಟೀಮ್’ ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
21 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮ
ಎಬೋಲಾ ಹೆಚ್ಚು ಹರಡಿರುವ ಕಾಂಗೋ ಮತ್ತು ಉಗಾಂಡ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ 21 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಆರೋಗ್ಯ ತಪಾಸಣೆ ಮತ್ತು ನಿಗಾ ನಡೆಸಲಾಗುತ್ತದೆ.
ಯಾವುದೇ ಪ್ರಯಾಣಿಕರಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಆರೋಗ್ಯ ಕೇಂದ್ರಗಳಿಗೆ ವರದಿ ಮಾಡುವಂತೆ ಸೂಚಿಸಲಾಗಿದೆ. ಅಂತಹ ಪ್ರಕರಣಗಳನ್ನು ತಕ್ಷಣವೇ ವಿಶೇಷ ತಂಡದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಶಂಕಿತ ರೋಗಿಗಳನ್ನು ಸಾಗಿಸಲು ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗಿದೆ. ಜೊತೆಗೆ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ (NIV) ಮೂಲಕ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ಎಬೋಲಾ ರೋಗದ ಲಕ್ಷಣಗಳು
ಎಬೋಲಾ ವೈರಸ್ ಸೋಂಕಿನ ಪ್ರಮುಖ ಲಕ್ಷಣಗಳು ಇವು:
- ಜ್ವರ, ತೀವ್ರ ತಲೆನೋವು
- ಸ್ನಾಯು ಮತ್ತು ಗಂಟಲು ನೋವು
- ವಾಂತಿ ಮತ್ತು ತೀವ್ರ ಅತಿಸಾರ
- ಹೊಟ್ಟೆ ನೋವು
- ಚರ್ಮದ ಮೇಲೆ ದದ್ದುಗಳು ಮತ್ತು ಕಣ್ಣು ಕೆಂಪಾಗುವುದು
ಸೋಂಕು ಹರಡುವ ವಿಧಾನ
ಎಬೋಲಾ ಗಾಳಿಯ ಮೂಲಕ ಹರಡುವುದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದು ನೇರ ಸಂಪರ್ಕದಿಂದ ಮಾತ್ರ ಹರಡುತ್ತದೆ.
ಸೋಂಕಿತ ವ್ಯಕ್ತಿಯ ರಕ್ತ, ಲಾಲಾರಸ, ಬೆವರು ಅಥವಾ ಇತರ ದೇಹದ ದ್ರವಗಳ ಸಂಪರ್ಕದಿಂದ ಸೋಂಕು ಹರಡಬಹುದು. ಜೊತೆಗೆ ಸೋಂಕಿತರು ಬಳಸಿದ ಬಟ್ಟೆ, ಹಾಸಿಗೆ ಅಥವಾ ವೈದ್ಯಕೀಯ ಉಪಕರಣಗಳ ಮೂಲಕವೂ ಹರಡುವ ಸಾಧ್ಯತೆ ಇದೆ.
ಹೀಗಾಗಿ ಆರೋಗ್ಯ ಸಿಬ್ಬಂದಿ, ಕುಟುಂಬದ ಸದಸ್ಯರು ಹಾಗೂ ನಿಕಟ ಸಂಪರ್ಕದಲ್ಲಿರುವವರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಇಲಾಖೆ ಎಚ್ಚರಿಸಿದೆ.

