ಪಡಿತರ ಅಕ್ಕಿ ಚೀಲ ವಿಚಾರದಲ್ಲಿ ಬೆದರಿಕೆ ಆರೋಪ: ಕಾಂಗ್ರೆಸ್ ಮುಖಂಡ ಸಹಿತ ಮೂವರ ಬಂಧನ

0
30

ಉಡುಪಿ : ಸರಕಾರದ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇರಿಸಿದ್ದರೆಂಬ ನೆಪದಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ನಾಗೇಂದ್ರ ಪುತ್ರನ್ (37), ಪಾರಂಪಳ್ಳಿ ಗ್ರಾಮದ ಪಿ. ಸುಮಂತ್ ಕುಂದರ್ (40) ಹಾಗೂ ಮೂಡುಹಡು ಗ್ರಾಮದ ಸಚಿನ್ ಶ್ರೀಯಾನ್ (32) ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಆಗಸ್ಟ್ 31ರಂದು ಸರಕಾರದ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿರುವುದಾಗಿ ಆರೋಪಿಗಳು ಸ್ಥಳೀಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆಯೊಡ್ಡಿ ಸುಲಿಗೆಗೆ ಯತ್ನಿಸಿದ್ದರು. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಿಂಚಿನ ಕಾರ್ಯಾಚರಣೆ

ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕೋಟ ಪೊಲೀಸ್ ಠಾಣೆಯ ಪಿಎಸ್‍ಐ (ಕಾನೂನು ಮತ್ತು ಸುವ್ಯವಸ್ಥೆ) ಪ್ರವೀಣ ಕುಮಾರ್ ಆರ್., ಪಿಎಸ್‍ಐ (ತನಿಖೆ) ಮಹಾಂತೇಶ ಜಾಬಗೌಡ ಹಾಗೂ ಸಿಬ್ಬಂದಿಗಳಾದ ವಿಜಯೇಂದ್ರ, ಶರತ್ ಮತ್ತು ಶಿವರಾಜ್ ಅವರನ್ನೊಳಗೊಂಡ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು.

ಸೆಪ್ಟೆಂಬರ್ 1ರಂದು ಪ್ರಕರಣದ ಪ್ರಮುಖ ಆರೋಪಿ ಸಚಿನ್ ಶ್ರೀಯಾನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇನ್ನುಳಿದ ಇಬ್ಬರು ತಲೆಮರೆಸಿಕೊಂಡ ಆರೋಪಿಗಳಾದ ನಾಗೇಂದ್ರ ಪುತ್ರನ್ ಹಾಗೂ ಸುಮಂತ್ ಕುಂದರ್ ಅವರನ್ನು ಸೆಪ್ಟೆಂಬರ್ 2ರಂದು ಮೈಸೂರು ಪ್ಯಾಲೇಸ್ ಎದುರಿನ ವಸ್ತುಪ್ರದರ್ಶನ ಮೈದಾನದ ಬಳಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.