ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿ ಗ್ರಾಮದ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ಏ.12ರಿಂದ 16ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಏ.11ರಂದು ಸಂಜೆ ಸಿದ್ಧಕಟ್ಟೆ ಕೇಂದ್ರ ಮೈದಾನದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಏ.12, 13 ಮತ್ತು 15ರಂದು ಬೆಳಿಗ್ಗೆ ಚಂಡಿಕಾಯಾಗ ನಡೆಯಲಿದ್ದು, 14ರಂದು ಸಂಜೆ ನಡುಬಲಿ ಉತ್ಸವ ಮತ್ತು 15ರಂದು ಮಧ್ಯಾಹ್ನ ರಥೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ ಚೆಂಡು ಉತ್ಸವ ಮತ್ತು ವಿವಿಧ ನಾಟಕ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಏ.16ರಂದು ರಾತ್ರಿ 10 ಗಂಟೆಗೆ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ತಿಳಿಸಿದ್ದಾರೆ.