ಮಂಗಳೂರಿನ ಪ್ರಮುಖ ಹಾಗೂ ಭವ್ಯವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ನವರಾತ್ರಿ ಪ್ರಮುಖವಾದದ್ದು. ಈ ಸಂದರ್ಭದಲ್ಲಿ ಮಂಗಳೂರು ನಗರ ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಹಾಗೂ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ, ವಾಹನ ಸಂಚಾರ ಹಾಗೂ ಜಾತ್ರೆಯ ತಾತ್ಕಾಲಿಕ ಮಳಿಗೆಗಳು (ಸಂತೆ) ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ, ತ್ಯಾಜ್ಯ ನಿರ್ವಹಣೆ ಮತ್ತು ಸುರಕ್ಷತೆಗೆ ಮುಂಚಿತವಾಗಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ಮನವಿ ಮಾಡುತ್ತಿದ್ದೇವೆ.
ಈ ಸಂಬಂಧ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಅದರ ಪ್ರತಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಕಳುಹಿಸಲಾಗಿದೆ. ದಸರಾ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು, ದೇವಸ್ಥಾನದ ಆಡಳಿತ ಮಂಡಳಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಸಮನ್ವಯದಿಂದ ಮುಂಚಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಟ್ರಸ್ಟ್ ಮನವಿ ಮಾಡಿದೆ.
ಮಂಗಳಾದೇವಿ ದೇವಸ್ಥಾನ ರಸ್ತೆಯಲ್ಲಿ ಟ್ರಸ್ಟ್‌ನ ಸಂಯೋಜಕರು ಕಳೆದ ಕೆಲವು ತಿಂಗಳುಗಳಿಂದ ಪ್ರತಿ ಶುಕ್ರವಾರ ಸಂಚಾರ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಸಂಚಾರ ನಿರ್ವಹಣೆಗೆ ಸಹಕರಿಸುತ್ತಿದ್ದಾರೆ. ಈ ಅನುಭವದ ಆಧಾರದ ಮೇಲೆ ದಸರಾ ಸಂದರ್ಭದಲ್ಲಿ ದೇವಸ್ಥಾನದ ಸುತ್ತಮುತ್ತ ಕನಿಷ್ಠ 100 ಮೀಟರ್ ಪ್ರದೇಶವನ್ನು ವಾಹನಗಳು ಹಾಗೂ ಮಳಿಗೆಗಳಿಲ್ಲದ ಸುರಕ್ಷಿತ ವಲಯವಾಗಿ ಕಾಯ್ದುಕೊಳ್ಳುವುದು, ಭಾರಿ ಹಾಗೂ ಸರಕು ವಾಹನಗಳ ಸಂಚಾರಕ್ಕೆ ಅಗತ್ಯ ನಿರ್ಬಂಧಗಳನ್ನು ವಿಧಿಸಿ ಪರ್ಯಾಯ ಮಾರ್ಗಗಳನ್ನು ಸೂಚಿಸುವುದು, ಮಳಿಗೆಗಳಿಗೆ ಸೂಕ್ತ ಸ್ಥಳ ನಿಗದಿಪಡಿಸುವುದು, ಬಸ್‌ಗಳಿಗೆ ಒಂದೇ ಸ್ಥಳದಲ್ಲಿ ನಿಲುಗಡೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಹೊಸ ಬಸ್ ನಿಲ್ದಾಣವನ್ನು ಬಳಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಟ್ರಸ್ಟ್ ಸಲಹೆ ನೀಡಿದೆ. ಜೊತೆಗೆ ಭಕ್ತರಿಗೆ ಅನುಕೂಲವಾಗುವಂತೆ ಸೂಕ್ತ ಪಾರ್ಕಿಂಗ್ ಮತ್ತು ಪಾದಚಾರಿ ವ್ಯವಸ್ಥೆಯನ್ನೂ ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿದೆ.
ತ್ಯಾಜ್ಯ ನಿರ್ವಹಣೆಯ ದೃಷ್ಟಿಯಿಂದ ಜಾತ್ರೆಯ ತಾತ್ಕಾಲಿಕ ಮಳಿಗೆಗಳಲ್ಲಿ (ಸಂತೆ) ಹಸಿ ಮತ್ತು ಒಣ ತ್ಯಾಜ್ಯಕ್ಕೆ ಪ್ರತ್ಯೇಕ ಬಿನ್‌ಗಳನ್ನು ಕಡ್ಡಾಯಗೊಳಿಸುವುದು, ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುವುದು ಅಗತ್ಯವಾಗಿದೆ. ನಿಯಮ ಉಲ್ಲಂಘನೆಯಾದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸೂಕ್ತ ದಂಡ ವಿಧಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಬೇಕು. ಮೆರವಣಿಗೆಗಳು ಮತ್ತು ಹೆಚ್ಚಿನ ಜನಸಂದಣಿ ಇರುವ ಸಮಯದಲ್ಲಿ ಸಂಚಾರ ಮಾರ್ಗ, ಪಾರ್ಕಿಂಗ್, ತ್ಯಾಜ್ಯ ಸಂಗ್ರಹಣೆ ಮತ್ತು ಸ್ವಚ್ಛತಾ ವ್ಯವಸ್ಥೆಗಳನ್ನು ಮುಂಚಿತವಾಗಿ ರೂಪಿಸಿ ನಿರಂತರವಾಗಿ ಮೇಲ್ವಿಚಾರಣೆ ನಡೆಸುವಂತೆ ಟ್ರಸ್ಟ್ ಮನವಿ ಮಾಡಿದೆ.
ಅವೇಕ್ ಕುಡ್ಲ – ಸಾರ್ವಜನಿಕರೊಂದಿಗೆ ಕೈಜೋಡಿಸುವ ಪ್ರಯತ್ನ
ನಗರದ ತ್ಯಾಜ್ಯ ಮತ್ತು ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವತಿಯಿಂದ “ಅವೇಕ್ ಕುಡ್ಲ” ಪರಿಕಲ್ಪನೆಯನ್ನು ಆರಂಭಿಸಲಾಗಿದೆ. ಸಮಸ್ಯೆಗಳನ್ನು ಗುರುತಿಸುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ನಿರಂತರವಾಗಿ ಗಮನಹರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ಸಾರ್ವಜನಿಕರು ಮತ್ತು ಸರ್ಕಾರಿ ವ್ಯವಸ್ಥೆಯ ನಡುವೆ ಒಂದು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತ್ಯಾಜ್ಯ ಮತ್ತು ಸಂಚಾರ ನಿರ್ವಹಣೆಯಂತಹ ನಗರ ಸಮಸ್ಯೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ. ದಸರಾ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಈ ಕ್ರಮಗಳೂ ಇದೇ ಉದ್ದೇಶದ ಮುಂದುವರಿದ ಭಾಗವಾಗಿವೆ.
ದಸರಾ ಕೇವಲ ಹಬ್ಬದ ಆಚರಣೆಯಾಗಿರದೆ, ನಮ್ಮ ನಗರದ ವ್ಯವಸ್ಥೆ ಮತ್ತು ನಾಗರಿಕ ಜವಾಬ್ದಾರಿಯನ್ನು ತೋರಿಸುವ ಸಂದರ್ಭವೂ ಆಗಬೇಕು. ಭಕ್ತರು, ವಾಹನ ಸವಾರರು, ಮಳಿಗೆ ಮಾಲೀಕರು, ಸ್ಥಳೀಯ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳು ನಿಯಮಗಳನ್ನು ಪಾಲಿಸಿ ಇಲಾಖೆಗಳೊಂದಿಗೆ ಸಹಕರಿಸಿದರೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಈ ಹಿನ್ನೆಲೆಯಲ್ಲಿ ಮಾಧ್ಯಮ ಮತ್ತು ಪತ್ರಿಕಾ ಸಂಸ್ಥೆಗಳು ಈ ವಿಷಯವನ್ನು ಸಾರ್ವಜನಿಕರಿಗೆ ತಲುಪಿಸಿ, ದಸರಾ ಸಂದರ್ಭದಲ್ಲಿ ಸರಿಯಾದ ವಿಲೇವಾರಿ, ಸ್ವಚ್ಛತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ಸಹಕರಿಸಬೇಕು ಎಂದು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವಿನಂತಿಸುತಿದ್ದೇವೆ. ಎಲ್ಲಾ ಇಲಾಖೆಗಳ ಸಮನ್ವಯ, ಸಾರ್ವಜನಿಕರ ಸಹಕಾರ ಮತ್ತು ನಿರಂತರ ಮೇಲ್ವಿಚಾರಣೆಯೊಂದಿಗೆ ಈ ವರ್ಷದ ದಸರಾವನ್ನು ಸ್ವಚ್ಛ, ಸುರಕ್ಷಿತ ಹಾಗೂ ಸುಗಮವಾಗಿ ನಡೆಸಿ, ಮಂಗಳೂರಿನ ವ್ಯವಸ್ಥೆಯನ್ನು ಇತರ ನಗರಗಳಿಗೂ ಮಾದರಿಯಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು.
