ಮಂಗಳೂರು : ಅತ್ತಾವರ ಮತ್ತು ಪಾಂಡೇಶ್ವರ ಪ್ರದೇಶಗಳಲ್ಲಿ ರಾಜಕಾಲುವೆಯಿಂದ ಮಳೆನೀರು ಗ್ರೀನ್ ಲ್ಯಾಂಡ್ ಲೇಔಟ್‌ಗೆ ಹರಿದು ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸ್ಥಳೀಯರ ಮಾಹಿತಿ ಪ್ರಕಾರ, ಕಳೆದ ಮೂರು ವರ್ಷಗಳಿಂದ ಅತ್ತಾವರ–ಪಾಂಡೇಶ್ವರ ಶಿವನಗರ ಸಂಪರ್ಕಿಸುವ ರಾಜಕಾಲುವೆಗೆ ಎರಡೂ ಬದಿಗಳ ತಡೆಗೋಡೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ಇದರಿಂದ ಮಳೆನೀರು ಸರಿಯಾಗಿ ಹರಿಯದೆ ಮನೆಗಳಿಗೆ ಹಾಗೂ ಲೇಔಟ್ ಪ್ರದೇಶಗಳಿಗೆ ನುಗ್ಗುತ್ತಿದೆ.
ಈ ಹಿನ್ನೆಲೆ, ಐವನ್ ಡಿಸೋಜಾ ಅವರು ಮಹಾನಗರ ಪಾಲಿಕೆ ಅಧಿಕಾರಿಗಳಾದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೇಶ್, ಮಿಥುನ್ ಹಾಗೂ ಜೂನಿಯರ್ ಇಂಜಿನಿಯರ್ ಚಿನ್ಮಯಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸ್ಥಳೀಯರು, “ನೀರಿನ ನಿಲುವಿನಿಂದ ಒಳಚರಂಡಿ ನೀರು ರಸ್ತೆಗೆ ಹರಿದು ದುರ್ವಾಸನೆ ಉಂಟಾಗುತ್ತಿದೆ. ಇದು ಕುಡಿಯುವ ಬಾವಿಗಳಿಗೆ ಸಹ ಹಾನಿ ಉಂಟುಮಾಡುತ್ತಿದೆ” ಎಂದು ದೂರಿದರು.
ಈ ಬಗ್ಗೆ ಮಾತನಾಡಿದ ಐವನ್ ಡಿಸೋಜಾ, ಸಮಸ್ಯೆಯನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಭವಿಷ್ಯದಲ್ಲಿ 1250 ಕೋಟಿ ರೂ. ಯೋಜನೆಯಡಿ ಶಾಶ್ವತ ಪರಿಹಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು. ಜೊತೆಗೆ ಸಾರ್ವಜನಿಕರ ಒತ್ತಾಯದ ಮೇರೆಗೆ ತಕ್ಷಣ ಹೂಳೆತ್ತುವ ಕಾಮಗಾರಿ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಪ್ರೇಮ್ ಬಲ್ಲಾಳ್, ದಿನೇಶ್ ಮೂಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

