10 ಗಂಟೆಯೊಳಗೆ ಕಚೇರಿಯಲ್ಲಿ ಹಾಜರಾತಿ ಕಡ್ಡಾಯ : AI-GPS ಆಧಾರಿತ ಹೊಸ ವ್ಯವಸ್ಥೆ ಜಾರಿ; ನಿಯಮ ಉಲ್ಲಂಘಿಸಿದರೆ ಕ್ರಮ!

0
114

ಬೆಂಗಳೂರು : ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನುಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಾಗಬೇಕು. ಈ ನಿರ್ದೇಶನವನ್ನು ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧಿಕೃತ ಆದೇಶ ಹೊರಡಿಸಿದ್ದು, ಸಾಂಪ್ರದಾಯಿಕ ಬಯೋಮೆಟ್ರಿಕ್ ವ್ಯವಸ್ಥೆಯ ಬದಲಿಗೆ ಕೃತಕ ಬುದ್ಧಿಮತ್ತೆ (AI) ಹಾಗೂ ಜಿಪಿಎಸ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಜೂನ್ 4ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಆಗಮಿಸಿ ಹಾಜರಾತಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಸ್ತುತ ಇ-ಆಡಳಿತ ಇಲಾಖೆಯ “ಕರ್ತವ್ಯ App”ನಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮಾಹಿತಿಯನ್ನು HRMS ಮೂಲಕ ನೋಂದಾಯಿಸಲಾಗಿದೆ. ಆದರೆ ಅನೇಕ ಸಿಬ್ಬಂದಿ ಈ ಆ್ಯಪ್ ಅನ್ನು ನಿಯಮಿತವಾಗಿ ಬಳಸದೇ ಇರುವುದನ್ನು ಸರ್ಕಾರ ಗಮನಿಸಿದ್ದು, ಇನ್ನುಮುಂದೆ ಕಡ್ಡಾಯವಾಗಿ ಬಳಸುವಂತೆ ಆದೇಶಿಸಿದೆ.

ಸರ್ಕಾರದ ಪ್ರಮುಖ ನಿರ್ದೇಶನಗಳು:

  • ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ “ಕರ್ತವ್ಯ App”ನಲ್ಲಿ Check-In ಮಾಡಬೇಕು.
  • ಕಚೇರಿಯಿಂದ ಹೊರಡುವ ವೇಳೆ ಕಡ್ಡಾಯವಾಗಿ Check-Out ದಾಖಲಿಸಬೇಕು.
  • ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಹಾಜರಾತಿ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಬೇಕು.
  • AI ಆಧಾರಿತ ವ್ಯವಸ್ಥೆಯ ಮೂಲಕ ಪ್ರತಿದಿನ ಹಾಜರಾತಿ ವರದಿ ಸ್ವಯಂಚಾಲಿತವಾಗಿ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲಾಗುತ್ತದೆ.
  • ಜಿಲ್ಲಾವಾರು ಮತ್ತು ಕಚೇರಿವಾರು ಹಾಜರಾತಿ ಮಾಹಿತಿಯನ್ನು ಸರ್ಕಾರ ನೇರವಾಗಿ ಪರಿಶೀಲಿಸಲಿದೆ.

ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ಯಶಸ್ವಿಯಾಗಿ ಜಾರಿಯಲ್ಲಿರುವ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಇದೀಗ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಿದೆ. ಇದರ ಮೂಲಕ ಸರ್ಕಾರಿ ಕಚೇರಿಗಳಲ್ಲಿ ಸಮಯಪಾಲನೆ, ಜವಾಬ್ದಾರಿತನ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟ ಹೆಚ್ಚುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here