ಮಂಗಳೂರಿನ 60 ವಾರ್ಡ್‌ಗಳಿಗೆ ‘ಅವೇಕ್ ಕುಡ್ಲ’ ವಿಸ್ತರಣೆ

0
6

ಮಂಗಳೂರು: ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್, ‘ನಮ್ಮ ಊರು–ನಮ್ಮ ಹೆಮ್ಮೆ, ನಮ್ಮ ಪರಿಸರ–ನಮ್ಮ ಜವಾಬ್ದಾರಿ’ ಎಂಬ ಧ್ಯೇಯದೊಂದಿಗೆ ಮಂಗಳೂರು ನಗರವನ್ನು ಸ್ವಚ್ಛ, ಸುರಕ್ಷಿತ ಹಾಗೂ ಉತ್ತಮ ನಿರ್ವಹಣೆಯ ನಗರವನ್ನಾಗಿಸುವ ಉದ್ದೇಶದಿಂದ ‘ಅವೇಕ್ ಕುಡ್ಲ’ ಪರಿಕಲ್ಪನೆಯನ್ನು ಜಾರಿಗೊಳಿಸುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಗಳಾದೇವಿ, ಬೋಳಾರ ಹಾಗೂ ಹೊಯ್ಗೆ ಬಜಾರ್ ವಾರ್ಡ್‌ಗಳಲ್ಲಿ ತ್ಯಾಜ್ಯ ಮತ್ತು ಸಂಚಾರ ನಿರ್ವಹಣೆ ಕುರಿತು ಕೈಗೊಂಡ ಕಾರ್ಯಗಳಿಂದ ದೊರೆತ ಅನುಭವದ ಆಧಾರದಲ್ಲಿ, ಜನರ ಸಕ್ರಿಯ ಸಹಭಾಗಿತ್ವದೊಂದಿಗೆ ಯೋಜನೆಯನ್ನು ಪಾಲಿಕೆಯ ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸುವ ಉದ್ದೇಶದಿಂದ 2025ರ ಏಪ್ರಿಲ್ 4ರಂದು ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಐಎಎಸ್ ಅವರು ‘ಅವೇಕ್ ಕುಡ್ಲ’ ಪರಿಕಲ್ಪನೆಗೆ ಚಾಲನೆ ನೀಡಿದ್ದರು.

ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ‘ಅವೇಕ್ ಕುಡ್ಲ’ ಆ್ಯಪ್ ಮೂಲಕ ಸಾರ್ವಜನಿಕರು ನೇರವಾಗಿ ದೂರು ಅಥವಾ ಸಮಸ್ಯೆಗಳನ್ನು ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದಾಖಲಾದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಸಹಕಾರ ಹಾಗೂ ಸ್ಥಳೀಯರ ಪಾಲ್ಗೊಳ್ಳುವಿಕೆಯೊಂದಿಗೆ ಅಧ್ಯಯನ–ಜಾಗೃತಿ–ಮೇಲ್ವಿಚಾರಣೆ–ಸಮನ್ವಯ–ಅನುಸರಣೆ ಎಂಬ ಪಂಚತತ್ವದ ಆಧಾರದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

1.20 ಲಕ್ಷ ಮನೆಗಳಿಗೆ ಭೇಟಿ ನೀಡುವ ಗುರಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂದಾಜು 1.20 ಲಕ್ಷ ಮನೆಗಳಿಗೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿ ಕುರಿತ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಹಾಗೂ ಪರಿಸರ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದು ‘ಅವೇಕ್ ಕುಡ್ಲ’ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಪಾಲಿಕೆಯ 60 ವಾರ್ಡ್‌ಗಳನ್ನು 20 ಗುಂಪುಗಳಾಗಿ ವಿಂಗಡಿಸಿ, ಪ್ರತಿ ಗುಂಪಿಗೆ ಒಬ್ಬರಂತೆ ಒಟ್ಟು 20 ಸಂಯೋಜಕರನ್ನು ನೇಮಿಸುವ ಯೋಜನೆ ರೂಪಿಸಲಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಂಯೋಜಕರಿಗೆ ತಜ್ಞರ ಮಾರ್ಗದರ್ಶನದಲ್ಲಿ ಒಂದು ವಾರದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುವುದು.

ತರಬೇತಿ ಪಡೆದ ಸಂಯೋಜಕರು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಘ-ಸಂಸ್ಥೆಗಳು, ಮನೆಗಳು ಹಾಗೂ ವಾಣಿಜ್ಯ ಕೇಂದ್ರಗಳಿಗೆ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆ, ಸಂಚಾರ ನಿಯಂತ್ರಣ ಹಾಗೂ ಪರಿಸರ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ತಮ್ಮ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ಪತ್ರ ಅಥವಾ ದೂರವಾಣಿ ಮೂಲಕ ತಿಳಿಸಿದಲ್ಲಿ, ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಅವುಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ಸೆ.12ರಂದು ‘ಅವೇಕ್ ಕುಡ್ಲ’ ಅವಲೋಕನ ಸಭೆ

‘ಅವೇಕ್ ಕುಡ್ಲ’ ಕಾರ್ಯಕ್ರಮವು ಸೆಪ್ಟೆಂಬರ್ 12ರಂದು ಶನಿವಾರ ಮಂಗಳೂರಿನ ಸ್ಟೇಟ್ ಬ್ಯಾಂಕ್‌ನ ಓಲ್ಡ್ ಪೋರ್ಟ್ ರಸ್ತೆಯಲ್ಲಿರುವ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆಯಲಿದೆ.

ಮಧ್ಯಾಹ್ನ 3.30ರಿಂದ 5.15ರವರೆಗೆ ‘ಮಂಗಳೂರು ನಗರದ ಅವಶ್ಯಕತೆ–ಸಮಸ್ಯೆಗಳು ಹಾಗೂ ಇವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಾರ್ವಜನಿಕರ ಪಾತ್ರ’ ವಿಷಯದ ಕುರಿತು ವಿಶೇಷ ಸಂವಾದ ನಡೆಯಲಿದೆ. ಸಂಜೆ 5.30ರಿಂದ 6.45ರವರೆಗೆ ‘ಅವೇಕ್ ಕುಡ್ಲ’ ಅವಲೋಕನ ಸಭೆ ನಡೆಯಲಿದೆ.

ಪಾಂಡೇಶ್ವರ–ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮನವಿ

ಪಾಂಡೇಶ್ವರ–ಹೊಯ್ಗೆ ಬಜಾರ್ ರೈಲ್ವೆ ಕ್ರಾಸಿಂಗ್‌ನ ಸಮಸ್ಯೆ ಹಾಗೂ ಮಂಗಳಾದೇವಿ ರಥಬೀದಿಯ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಈ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾರ್ಯಪಡೆ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.

ಭವಿಷ್ಯದ ದೃಷ್ಟಿಯಿಂದ ಪಾಂಡೇಶ್ವರ–ಹೊಯ್ಗೆ ಬಜಾರ್ ರೈಲ್ವೆ ಸಂಬಂಧಿತ ಚಟುವಟಿಕೆಗಳನ್ನು ಪಡೀಲ್‌ಗೆ ಸ್ಥಳಾಂತರಿಸುವ ಸಾಧ್ಯತೆಯನ್ನು ಜಿಲ್ಲಾಡಳಿತ, ರೈಲ್ವೆ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಲ್ಲಿ ರೈಲ್ವೆ ಕ್ರಾಸಿಂಗ್‌ನಿಂದ ಉಂಟಾಗುತ್ತಿರುವ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಟ್ರಸ್ಟ್ ಅಭಿಪ್ರಾಯಪಟ್ಟಿದೆ.

ನಗರದ ಸಮಸ್ಯೆಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದ್ದು, ಕಳೆದ ಹತ್ತು ವರ್ಷಗಳಿಂದ ಟ್ರಸ್ಟ್‌ನ ಸಮಾಜಮುಖಿ ಕಾರ್ಯಗಳಿಗೆ ಬೆಂಬಲ ನೀಡುತ್ತಿರುವ ಮಾಧ್ಯಮ ಮಿತ್ರರು, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಹಾಗೂ ಪ್ರಜ್ಞಾವಂತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಲಹೆ, ಸಹಕಾರ ಹಾಗೂ ಬೆಂಬಲ ನೀಡುವಂತೆ ಟ್ರಸ್ಟ್ ವಿನಂತಿಸಿದೆ.