ಮುಂಬೈನ ಡೊಂಬಿವಲಿಯಲ್ಲಿ ಕರಾವಳಿಯ ಸಾಂಪ್ರದಾಯಿಕ ಯಕ್ಷಗಾನ ಕಲೆಯ ವೈಭವವನ್ನು ಅನಾವರಣಗೊಳಿಸುವ ‘ಬಡಗು ಯಕ್ಷಸಂಭ್ರಮ’ ಕಾರ್ಯಕ್ರಮವು ಜುಲೈ 15ರಂದು ಅದ್ದೂರಿಯಾಗಿ ನಡೆಯಲಿದೆ. ಹೆಸರಾಂತ ಹೋಟೆಲ್ ಉದ್ಯಮಿ, ಯಕ್ಷಕಲಾ ಸಂರಕ್ಷಕ ಹಾಗೂ ಕಲಾಪ್ರೇಮಿ ರತ್ನಾಕರ ಹೆಗ್ಡೆ ಅವರ ವ್ಯವಸ್ಥಾಪಕತ್ವದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.), ನಡೂರು–ಮಂದಾರ್ತಿ, ಉಡುಪಿ ಜಿಲ್ಲೆ ವತಿಯಿಂದ “ಶ್ರೀ ಕಾಜ್ರಳ್ಳಿ ಕ್ಷೇತ್ರ ಮಹಾತ್ಮ” ಎಂಬ ಕನ್ನಡ ಯಕ್ಷಗಾನ ಪ್ರಸಂಗವನ್ನು ಜುಲೈ 15ರಂದು ಮಧ್ಯಾಹ್ನ 4 ಗಂಟೆಗೆ ಡೊಂಬಿವಲಿ (ಪೂರ್ವ)ದ ಮಾತೋಶ್ರೀ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರದರ್ಶಿಸಲಾಗುತ್ತದೆ.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬಡಗು ಯಕ್ಷರಂಗದಲ್ಲಿ “ವೀರ ಮಹಿಷಾಸುರ” ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಯಕ್ಷಗಾನ ಕಲಾವಿದ ನಂದೀಶ್ ಮೊಗವೀರ ಜನ್ನಾಡಿ ಅವರನ್ನು ಗಣ್ಯರ ಸಮ್ಮುಖದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುತ್ತದೆ.
ಸೌಡ ಗ್ರಾಮದ ಮಂಜುನಾಥ ಮೊಗವೀರ ಮತ್ತು ಬೇಬಿ ಮೊಗವೀರ ದಂಪತಿಯ ಪುತ್ರರಾಗಿರುವ ನಂದೀಶ್ ಜನ್ನಾಡಿ, ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡು, ಗುರು ಸೌಡ ಭಾಸ್ಕರ ಅವರ ಮಾರ್ಗದರ್ಶನದಲ್ಲಿ ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯಲ್ಲಿ ತರಬೇತಿ ಪಡೆದು ಯಕ್ಷರಂಗ ಪ್ರವೇಶಿಸಿದರು. ಮಡಮಕ್ಕಿ ಮೇಳದಲ್ಲಿ ಕಲಾಸೇವೆ ಆರಂಭಿಸಿದ ಅವರು, ಬಳಿಕ ಸಿಗಂದೂರು ಸೇರಿದಂತೆ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿ, ಕಳೆದ ಏಳು ವರ್ಷಗಳಿಂದ ಪ್ರಸಿದ್ಧ ಮಾರಣಕಟ್ಟೆ ಮೇಳದಲ್ಲಿ ಪ್ರಮುಖ ಬಣ್ಣದ ವೇಷಧಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಮಹಿಷಾಸುರ, ಘಟೋತ್ಕಚ, ಉಗ್ರ ನರಸಿಂಹ, ವೀರಭದ್ರ, ಹೈಗುಳಿ, ಮಹಿದಾನವಿ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿರುವ ನಂದೀಶ್ ಜನ್ನಾಡಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ಯುವ ಯಕ್ಷಾಭಿಮಾನಿಗಳ ಮನಗೆದ್ದಿದ್ದಾರೆ. ವಿಶೇಷವಾಗಿ “ಪ್ರಚಂಡ ಮಹಿಷಾಸುರ” ಪಾತ್ರದ ಮೂಲಕ ಅವರು ಬಡಗು ಯಕ್ಷರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಸಂಪಾದಿಸಿದ್ದಾರೆ.
ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅನನ್ಯ ಸೇವೆಯನ್ನು ಗುರುತಿಸಿ ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳ ಸಂಘ-ಸಂಸ್ಥೆಗಳು ಅವರನ್ನು ಈಗಾಗಲೇ ಹಲವು ಪ್ರಶಸ್ತಿ ಹಾಗೂ ಸನ್ಮಾನಗಳಿಂದ ಗೌರವಿಸಿವೆ. ಡೊಂಬಿವಲಿಯ ಬಡಗು ಯಕ್ಷಸಂಭ್ರಮದಲ್ಲೂ ಅವರಿಗೆ ಗೌರವ ಸಮರ್ಪಿಸುವ ಮೂಲಕ ಅವರ ಕಲಾಸಾಧನೆಗೆ ಮತ್ತೊಂದು ಮನ್ನಣೆ ದೊರೆಯಲಿದೆ.

