ಮುದರಂಗಡಿ ಉದ್ಯಮಿ ಹತ್ಯೆ ಪ್ರಕರಣ: ಮೂವರು ಅಂತಾರಾಜ್ಯ ಸುಪಾರಿ ಕಿಲ್ಲರ್‌ಗಳ ಬಂಧನ

0
84

ಉಡುಪಿ : ಕಾಪು ತಾಲೂಕಿನ ಮುದರಂಗಡಿಯ ಸೆಂಟ್‌ ಕ್ಷೇವಿಯರ್‌ ಚರ್ಚ್‌ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್‌ ಎಂಟರ್‌ಪ್ರೈಸಸ್‌ ಮಾಲೀಕ ಡೇವಿಡ್‌ ಡಿಸೋಜಾ ಅವರನ್ನು ಪಿಸ್ತೂಲ್‌ನಿಂದ ಗುಂಡು ಹೊಡೆದು ಕೊಲೆ ಮಾಡಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ, ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಅಂತಾರಾಜ್ಯ ಸುಪಾರಿ ಕಿಲ್ಲರ್‌ಗಳನ್ನು ಬಂಧಿಸಿದ್ದಾರೆ.

ಬಂಧನದ ವೇಳೆ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಮುಖ್ಯ ಶೂಟರ್‌ನ ಕಾಲಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ, ಪಿಸ್ತೂಲ್ ಸಮೇತ ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ: ಆಗಸ್ಟ್‌ 7ರಂದು ಮಧ್ಯಾಹ್ನ 3:45ರ ಸುಮಾರಿಗೆ ಡೇವಿಡ್‌ ಡಿಸೋಜಾ ಅವರು ತಮ್ಮ ಕಚೇರಿಯಿಂದ ಹೊರಬಂದು ಥಾರ್‌ ವಾಹನದ ಬಳಿ ತೆರಳುತ್ತಿದ್ದಾಗ, ಬೈಕಿನಲ್ಲಿ ಬಂದ ಅಪರಿಚಿತರು ಡೇವಿಡ್‌ ಅವರ ತಲೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಈ ಸಂಬಂಧ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೈಂದೂರಿನ ಒತ್ತಿನಾಣೆಯಲ್ಲಿ ಪೊಲೀಸರ ಫೈರಿಂಗ್

ತನಿಖೆ ಕೈಗೆತ್ತಿಕೊಂಡ ಪೊಲೀಸ್ ತಂಡಕ್ಕೆ ಆರೋಪಿಗಳು ಬಸ್ಸಿನಲ್ಲಿ ಭಟ್ಕಳದ ಕಡೆಗೆ ಪರಾರಿಯಾಗುತ್ತಿರುವ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬೈಂದೂರಿನ ಒತ್ತಿನಾಣೆ ಬಳಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ, ಆರೋಪಿಗಳು ಬಸ್ಸಿನಿಂದ ಇಳಿದು ಓಡಲಾರಂಭಿಸಿದರು.

ಈ ವೇಳೆ ಕಾಪು ಪಿ.ಎಸ್.ಐ. ತೇಜಸ್ವಿ ಅವರನ್ನು ತಳ್ಳಿ, ಕೈಯಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಉತ್ತರ ಪ್ರದೇಶ ಮೂಲದ ಮುಖ್ಯ ಶೂಟರ್ ರಾಜು (42) ಎಂಬಾತನ ಕಾಲಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ವಶಕ್ಕೆ ಪಡೆದರು. ಈ ಹಿನ್ನೆಲೆಯಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇಬ್ಬರು ಸಹಚರರು ಸೆರೆ

ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉತ್ತರಖಂಡ ಮೂಲದ ಅಜಯ್‌ ರಸ್ತೋಗಿ ಅಲಿಯಾಸ್‌ ಅನ್ಮೋಲ್‌ (23) ಎಂಬಾತನನ್ನು ಕುಮಟಾದಲ್ಲಿ ಹಾಗೂ ಬಿಹಾರ ಮೂಲದ ಜಿಯಾಹುಲ್‌ ವಜೂಲ್‌ ಶೇಖ್‌ ಅಲಿಯಾಸ್‌ ದೀಪಕ್‌ (38) ಎಂಬಾತನನ್ನು ಭಟ್ಕಳದಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಬೆಳಿಗ್ಗೆ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿ ಎರ್ಮಾಲ್‌ನಲ್ಲಿ ಬಿಟ್ಟು ಹೋಗಿದ್ದ ಮೋಟಾರು ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.

ಸುಪಾರಿ ಕೊಲೆ

ಮೃತ ಡೇವಿಡ್‌ ಡಿಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ಉಂಟಾಗಿದ್ದ ವೈಮನಸ್ಸೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ದ್ವೇಷದಿಂದ ಅನ್ಯ ರಾಜ್ಯದ ಕಂಪೆನಿಯು ಸುಪಾರಿ ನೀಡಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೃತ್ಯಕ್ಕೆ ಸಹಕರಿಸಿದ, ಹಣಕಾಸಿನ ನೆರವು ಹಾಗೂ ಆಶ್ರಯ ನೀಡಿದ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ

ಆರೋಪಿಯನ್ನು ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡ ಕಾಪು ಪಿ.ಎಸ್.ಐ. ತೇಜಸ್ವಿ ಹಾಗೂ ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಆರೋಪಿ ರಾಜು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ, ಕಾಪು, ಬೈಂದೂರು, ಕುಂದಾಪುರ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಪಿ.ಎಸ್.ಐ.ಗಳು, ಭಟ್ಕಳ-ಕುಮಟಾ ಪೊಲೀಸರು, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್.‌ ಸೆಲ್‌ ತಂಡ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.