ಉತ್ತರ ಪ್ರದೇಶ: ಸಲಿಂಗ ಪ್ರೇಮ ತಪ್ಪಾ ಅಂತಾ ಕೇಳಿದ್ರೆ ಈಗಿನ ಕಾಲಮಾನದಲ್ಲಿ ಖಂಡಿತಾ ತಪ್ಪಲ್ಲ. ಆದರೆ ಅದು ನೈತಿಕತೆಯ ಎಲ್ಲೆ ಮೀರಬಾರದು ಎಂದು ಒಂದಷ್ಟು ಜನ ಹೇಳುತ್ತಾರೆ. ಇದೀಗ ಸಲಿಂಗ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಅಪರೂಪದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಮುಘಲ್‌ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಿಶಿಷ್ಟ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವಾಸಿಸುತ್ತಿದ್ದ ಎರಡು ವಿಭಿನ್ನ ಜಾತಿಗೆ ಸೇರಿದ ಹುಡುಗಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಹುಡುಗಿಯರಿಬ್ಬರು ಪೋಷಕರಿಗೆ ಹೆದರಿ ಮನೆಯಿಂದ ಓಡಿಹೋಗಿ ಉಜ್ಜಯಿನಿಯಲ್ಲಿ ವಿವಾಹವಾಗಿದ್ದಾರೆ.
ಇಬ್ಬರು ಹೆಣ್ಮಕ್ಕಳು ಕಾಣೆಯಾದ ಬಗ್ಗೆ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಇಬ್ಬರೂ ಹುಡುಗಿಯರನ್ನು ಹುಡುಕಿ ಉಜ್ಜಯಿನಿಯಲ್ಲಿ ಸುರಕ್ಷಿತವಾಗಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದರು. ನಂತರ, ಇಬ್ಬರನ್ನೂ ವಿಚಾರನೆ ನಡೆಸಿದ ಬಳಿಕ ಅವರನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಅಂದಹಾಗೆ, ಮುಘಲ್ಸರಾಯ್ ಕೊತ್ವಾಲಿ ಪ್ರದೇಶದ ಹಳ್ಳಿಯಲ್ಲಿ ವಾಸಿಸುತ್ತಿದ್ದ ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸುತ್ತಿದ್ದರು. ಮಾಹಿತಿಯ ಪ್ರಕಾರ, ಬೇರೆ ಜಾತಿಗೆ ಸೇರಿದ ಕುಟುಂಬವು ಆ ಹಳ್ಳಿಯಲ್ಲಿ ಇನ್ನೊಂದು ಜಾತಿಗೆ ಸೇರಿದ ಕುಟುಂಬದ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದೆ. ಆ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಹುಡುಗಿಯರ ಮಧ್ಯೆ ಸ್ನೇಹ ಉಂಟಾಗಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರಿಬ್ಬರ ಮಧ್ಯೆ ಆಕರ್ಷಣೆ ಉಂಟಾಗಿತ್ತು. ಆಕರ್ಷಣೆ ಪರಸ್ಪರ ಪ್ರೀತಿಗೆ ತಿರುಗಿ ಎರಡೂ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಸೇರಿ ಸಲಿಂಗ ಕಾಮ ನಡೆಸುತ್ತಿದ್ದರು. ಇಬ್ಬರೂ ಹುಡುಗಿಯರೇ ಆಗಿರುವುದರಿಂದ ಎರಡೂ ಮನೆಯವರಿಗೆ ಯಾವುದೇ ಸಂಶಯ ಬಂದಿರಲಿಲ್ಲ.
ಪದೇ ಪದೇ ಇವರಿಬ್ಬರೂ ಒಟ್ಟಿಗೆ ಇರೋದು, ಆಗಾಗ ಕೋಣೆಯಲ್ಲಿ ಲಾಕ್ ಮಾಡಿ ಇಬ್ಬರೇ ಕಾಲ ಕಳೆಯುವುದನ್ನು ನೋಡಿದರೂ ಸಹ ಮನೆಯವರಿಗೆ ಅನುಮಾನ ಬಂದಿರಲಿಲ್ಲ. ಇಬ್ಬರು ಹುಡುಗಿಯರು ಏನೋ ಸ್ನೇಹಿತರಾಗಿ ಕಾಲ ಕಳೆಯುತ್ತಿದ್ದಾರೆ ಎಂದೇ ಅಂದುಕೊಂಡಿದ್ದರು ವಿನಃ ಸಲಿಂಗ ಪ್ರೇಮದ ಬಗ್ಗೆ ಯಾರಿಗೂ ಸಂಶಯ ಬಂದಿರಲಿಲ್ಲ. ಮಾಹಿತಿ ಪ್ರಕಾರ, ಕಳೆದ 6 ವರ್ಷಗಳಿಂದ ಇಬ್ಬರ ನಡುವೆ ಪ್ರೇಮ ಸಂಬಂಧ ನಡೆಯುತ್ತಿತ್ತು. ಪದೇ ಪದೇ ಮನೆಯಲ್ಲಿಯೇ ಭೇಟಿ ಮಾಡಿ ಸಲಿಂಗ ಕಾಮ ನಡೆಸುತ್ತಿದ್ದರೂ ಸಹ ಅವರ ಪ್ರೀತಿಯ ಬಗ್ಗೆ ಅವರ ಕುಟುಂಬಕ್ಕೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಸುಮಾರು ಒಂದು ವಾರದ ಹಿಂದೆ, ಇಬ್ಬರೂ ಹುಡುಗಿಯರು ಮನೆಯಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದರು. ಇದಾದ ನಂತರ ಅವರ ಕುಟುಂಬ ಸದಸ್ಯರು ಚಿಂತಿತರಾಗಿ ಈ ಬಗ್ಗೆ ಮುಘಲ್‌ಸರಾಯ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಆಗ ಅವರ ಮೊಬೈಲ್ ನೆಟ್‌ವರ್ಕ್ ಆಧರಿಸಿ ಉಜ್ಜಯಿನಿಯಲ್ಲಿ ಅವರಿಬ್ಬರ ಸ್ಥಳವನ್ನು ಪೊಲೀಸರು ಕಂಡುಕೊಂಡರು. ಪೊಲೀಸರು ಕುಟುಂಬ ಸದಸ್ಯರೊಂದಿಗೆ ಇಬ್ಬರು ಹುಡುಗಿಯರನ್ನು ಹುಡುಕಲು ಉಜ್ಜಯಿನಿಗೆ ಹೋದಾಗ ಅವರಿಬ್ಬರೂ ಮದುವೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ಲಿಂದ ಇಬ್ಬರೂ ಹುಡುಗಿಯರನ್ನು ಪೊಲೀಸರು ವಶಕ್ಕೆ ಪಡೆದು ವಾಪಸ್ ಊರಿಗೆ ಕರೆದುಕೊಂಡು ಬಂದರು.