ಬೆಳ್ತಂಗಡಿ : ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ..!

0
33

ಬೆಳ್ತಂಗಡಿ : ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆಗಳು ತೀವ್ರ ಶಿಕ್ಷಕರ ಕೊರತೆಯ ಸಂಕಷ್ಟವನ್ನು ಎದುರಿಸುತ್ತಿವೆ. ತಾಲೂಕಿನಲ್ಲಿ ಒಟ್ಟು 326 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, 14 ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ 42 ಶಾಲೆಗಳು ಕೇವಲ ಒಬ್ಬ ಶಿಕ್ಷಕರ ಮೇಲೆ ಅವಲಂಬಿತವಾಗಿವೆ.

ತಾಲೂಕಿನಲ್ಲಿ 56 ಕಿರಿಯ ಪ್ರಾಥಮಿಕ ಹಾಗೂ 112 ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು 178 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಒಟ್ಟು 888 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದರೂ ಪ್ರಸ್ತುತ ಕೇವಲ 562 ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನೂರಾರು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ನೇರ ಪರಿಣಾಮ ಬೀಳುತ್ತಿದೆ.

ಡೆಪ್ಯುಟೇಶನ್ ಶಿಕ್ಷಕರಿಂದಲೇ ಶಾಲೆಗಳ ನಿರ್ವಹಣೆ

ಶೂನ್ಯ ಶಿಕ್ಷಕರಿರುವ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಹತ್ತಿರದ ಶಾಲೆಗಳಿಂದ ಡೆಪ್ಯುಟೇಶನ್ ಆಧಾರದಲ್ಲಿ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಒಬ್ಬ ಶಿಕ್ಷಕರು ಎರಡು ಅಥವಾ ಹೆಚ್ಚಿನ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘಗಳು, ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಶಿಕ್ಷಣ ವ್ಯವಸ್ಥೆ ಮುಂದುವರಿಸಲಾಗುತ್ತಿದೆ.

14 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ!

ತಾಲೂಕಿನ ಎಳನೀರು ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಅತ್ತಾಜೆ, ಬಜಿಲ, ಹೊಸಪಟ್ಟ ಕಲ್ಲಕಟ್ಟಣೆ, ಕರಿಯಾಳು, ಕೊಳಕೆಬೈಲು, ಕೋಲ್ಪಾಡಿ, ಮಂಜೊಟ್ಟ, ಮೊಗ್ರು, ಮೂಲಾರು, ನಾವೂರ, ರಕ್ತೇಶ್ವರಿ ಪದವು ಹಾಗೂ ಉಜೈಬೆಟ್ಟು ಸೇರಿದಂತೆ 14 ಶಾಲೆಗಳು ಸಂಪೂರ್ಣ ಶಿಕ್ಷಕರಿಲ್ಲದೆ ಕಾರ್ಯನಿರ್ವಹಿಸುತ್ತಿವೆ.

42 ಶಾಲೆಗಳಲ್ಲಿ ಒಬ್ಬರೇ ಗುರು

ಬೂಡುಜಾಲು, ಚಾಮುಂಡಿನಗರ, ಗುಂಡೂರಿ, ಹೇವಾಜೆ, ಕಂಚಿನಡ್ಕ, ಕುದ್ಯಾಡಿ, ನಡುಜಾರು, ನೆಕ್ಕಿಲು, ಶಿಬಾಜೆ ಸೇರಿದಂತೆ ಹಲವು ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಅಣಿಯೂರು, ಬಾರ್ಯ, ದೇವನಾರಿ, ಕಲ್ಲೇರಿ, ಕಣಿಯೂರು, ಕಸಬ, ಪಟ್ರಮೆ, ಪೆರ್ಲ, ತಿಮ್ಮಣಬೆಟ್ಟು ಸೇರಿದಂತೆ ಅನೇಕ ಹಿರಿಯ ಪ್ರಾಥಮಿಕ ಶಾಲೆಗಳು ಕೇವಲ ಒಬ್ಬ ಶಿಕ್ಷಕರಿಂದಲೇ ನಡೆಸಲ್ಪಡುತ್ತಿವೆ.

ವಿದ್ಯಾರ್ಥಿಗಳ ಸಂಖ್ಯೆ ಕುಸಿತದತ್ತ

ಶಿಕ್ಷಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕ ಪೋಷಕರಲ್ಲಿ ಹೆಚ್ಚುತ್ತಿದೆ. ಪರಿಣಾಮವಾಗಿ ಗ್ರಾಮೀಣ ಭಾಗದ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕಳುಹಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.

“ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ”

“ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಡೆಪ್ಯುಟೇಶನ್ ಮೂಲಕ ಶಿಕ್ಷಕರನ್ನು ನಿಯೋಜಿಸುತ್ತಿದ್ದೇವೆ. ಸರ್ಕಾರ ನೀಡಿರುವ ಅತಿಥಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ದಾನಿಗಳ ಸಹಕಾರದಲ್ಲಿಯೂ ಅತಿಥಿ ಶಿಕ್ಷಕರನ್ನು ಒದಗಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು” ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here