ಒಂದೇ ರಾತ್ರಿ ಭೀಮಾತೀರ ಕೆಂಪು : ಆಸ್ತಿ ಜಗಳಕ್ಕೆ ಆರು ಮಂದಿಯ ಕೊಲೆ..!

0
56

ಯಂಕರ್ : ಭೀಮಾತೀರ ಪ್ರದೇಶದಲ್ಲಿ ಮತ್ತೆ ರಕ್ತದ ಕಲೆ ಮಸುಕಾಗದ ಘಟನೆ ನಡೆದಿದ್ದು, ಆಸ್ತಿ ವಿವಾದ ಇದೀಗ ಆರು ಜೀವಗಳನ್ನು ಬಲಿ ಪಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಭೀಕರ ಹತ್ಯಾಕಾಂಡ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕುಟುಂಬಗಳ ನಡುವಿನ ಜಮೀನು ವೈಷಮ್ಯ ರಕ್ತಪಾತಕ್ಕೆ ತಿರುಗಿ ಗ್ರಾಮದಲ್ಲಿ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹತ್ಯೆಗೀಡಾದವರನ್ನು ಚಂದು ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ ಹಾಗೂ ಶಬ್ಬೀರ್ ನದಾಫ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮೊದಲು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬಳಿಕ ಗುಂಡಿನ ದಾಳಿ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಘಟನೆ ನಡೆದ ಹೊಲದ ಸುತ್ತಮುತ್ತ ರಕ್ತದ ಗುರುತುಗಳು ಕಂಡುಬಂದಿದ್ದು, ಮೃತದೇಹಗಳ ಸ್ಥಿತಿ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ, ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ ನಿರಾಳೆ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಜಮೀನು ವಿಚಾರವಾಗಿ ತೀವ್ರ ವೈಷಮ್ಯ ಮುಂದುವರಿದಿತ್ತು. ಈ ಕುರಿತು ಗ್ರಾಮ ಮಟ್ಟದಲ್ಲಿ ಹಲವು ಬಾರಿ ರಾಜಿ ಪಂಚಾಯತಿ ನಡೆದಿದ್ದರೂ ವಿವಾದ ಅಂತ್ಯವಾಗಿರಲಿಲ್ಲ. ಕೆಲ ದಿನಗಳ ಹಿಂದೆ ನಡೆದ ಪಂಚಾಯತಿಯಲ್ಲೂ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ನಿರಾಳೆ ಕುಟುಂಬವು ಸುಮಾರು ಆರು ತಿಂಗಳ ಹಿಂದೆ 24 ಎಕರೆ ವಿವಾದಿತ ಜಮೀನನ್ನು ಖರೀದಿಸಿತ್ತು. ಜಮೀನು ಖರೀದಿ ಮಾಡಬಾರದು ಎಂದು ಕೆಲವರು ಬೆದರಿಕೆ ಹಾಕಿದ್ದರೂ ಕುಟುಂಬ ಅದನ್ನು ಲೆಕ್ಕಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಮೂಲಕ ಜಮೀನು ಸ್ವಚ್ಛಗೊಳಿಸಿ ಕೃಷಿ ಕಾರ್ಯ ಆರಂಭಿಸುತ್ತಿದ್ದ ವೇಳೆ 15 ರಿಂದ 20 ಮಂದಿಯ ಗುಂಪು ಏಕಾಏಕಿ ದಾಳಿ ನಡೆಸಿದೆ.

ದಾಳಿಕೋರರು ಹೊಲದಲ್ಲೇ ಕುಟುಂಬ ಸದಸ್ಯರನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಂತರ ಗುಂಡು ಹಾರಿಸಿರುವುದಾಗಿ ತಿಳಿದುಬಂದಿದೆ. ಘಟನೆಯ ವೇಳೆ ಮಹಿಳೆಯರು ಹಾಗೂ ಮಕ್ಕಳು ಪ್ರಾಣ ಉಳಿಸಿಕೊಳ್ಳಲು ಕಿರುಚಾಡಿದ ದೃಶ್ಯಗಳು ಗ್ರಾಮಸ್ಥರನ್ನು ನಡುಗಿಸಿವೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಇದೇ ವೇಳೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಭೀಮಾತೀರ ಭಾಗದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿರುವುದು ಜನರಲ್ಲಿ ಆತಂಕ ಮೂಡಿಸಿದ್ದು, ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳು ಎದ್ದಿವೆ.

ಪ್ರಕರಣದ ನಿಖರ ಹಿನ್ನೆಲೆ, ದಾಳಿಯಲ್ಲಿ ಭಾಗಿಯಾದವರ ಗುರುತು ಹಾಗೂ ಸಂಚಿನ ಹಿಂದೆ ಇರುವ ಅಂಶಗಳ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಎಸ್.ಪಿ. ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here