‘ತೆಲಿಕೆ ನಲಿಕೆ’ ಮಕ್ಕಳ ಶಿಬಿರ ಸಮಾರೋಪ

ಮಂಗಳೂರು : ತುಳು ಜನಪದ ಕಥೆಗಳನ್ನು, ತುಳುನಾಡಿನ ಆಟ ಕೂಟಗಳನ್ನು ಮಕ್ಕಳಿಗೆ ಪರಿಚಯಿಸಿದ ‘ತೆಲಿಕೆ ನಲಿಕೆ’ ಮಕ್ಕಳ ಶಿಬಿರವು ಒಳ್ಳೆಯ ಪ್ರಯತ್ನ ಹಾಗೂ ನಮ್ಮ ಮಣ್ಣಿನ ಕಂಪನ್ನು ಈ ಶಿಬಿರದಲ್ಲಿ ಮಕ್ಕಳು ಅನುಭವಿಸಲು ಸಾಧ್ಯವಾಗಿರುವುದು ಸಂತಸದ ವಿಚಾರ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಉರ್ವಾಸ್ಟೋರಿನ ತುಳು ಭವನದಲ್ಲಿ ಹಮ್ಮಿಕೊಂಡ ಒಂದು ವಾರಗಳ ಅವಧಿಯ ‘ತೆಲಿಕೆ ನಲಿಕೆ’ ಮಕ್ಕಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅತಿಥಿಯಾಗಿ ಪಾಲ್ಗೊಂಡ ಬೃಂದಾವನ ಯೋಗ ಮತ್ತು ನೇಚರ್ ಕೇರ್ ಸಂಸ್ಥೆಯ ಅಧ್ಯಕ್ಷೆ ಡಾ. ಶಾರದಾ ಬಂಗೇರ ಅವರು ಮಾತನಾಡಿ, ಮಕ್ಕಳ ಶಿಬಿರಗಳು ಬೇಸಿಗೆಯಲ್ಲಿ ಮಕ್ಕಳ ಆರೋಗ್ಯದ ವಿಚಾರಗಳ ಬಗ್ಗೆ ಕೂಡ ಗಮನ ಹರಿಸಬೇಕು, ಪೋಷಕರು ಸಾಧ್ಯವಾದಷ್ಟು ಮಕ್ಕಳಿಗೆ ಮನೆ ಮದ್ದು ಹಾಗೂ ನೈಸರ್ಗಿಕವಾಗಿ ಲಭ್ಯವಿರುವ ಪಾನೀಯಗಳನ್ನು ನೀಡಬೇಕು, ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಧ್ಯಕ್ಷತೆ ವಹಿಸಿದ್ದರು.
ತೆಲಿಕೆ ನಲಿಕೆ ಶಿಬಿರದ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ ರಂಗ ಕಲಾವಿದ ವಿನೋದ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಕಾಡೆಮಿ ಸದಸ್ಯೆ ಅಕ್ಷಯ ಆರ್ .ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಿಬಿರಾರ್ಥಿಗಳು ತುಳು ಹಾಡು, ತುಳು ಕಥೆ, ತುಳು ರೂಪಕಗಳನ್ನು ಪ್ರಸ್ತುತ ಪಡಿಸಿದರು.

