ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಹಾಗೂ ಆಹಾರ ಕಿಟ್ ವಿತರಣೆ

0
20

ಉಡುಪಿ : ದಿವ್ಯಾಂಗ ರಕ್ಷಣಾ ಸಮಿತಿ (ರಿ.) ಕೋಡವೂರು ಹಾಗೂ MCKS ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಮಾಸಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಕೋಡವೂರಿನಲ್ಲಿ ಯಶಸ್ವಿಯಾಗಿ ನಡೆಯಿತು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆಸ್ಪತ್ರೆ, NCD ಘಟಕ ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ದಿವ್ಯಾಂಗ ಹಾಗೂ ಅಶಕ್ತ ಫಲಾನುಭವಿಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ದಿವ್ಯಾಂಗ ರಕ್ಷಣಾ ಸಮಿತಿಯ 49ನೇ ಮಾಸಿಕ ಸವಲತ್ತು ವಿತರಣಾ ಕಾರ್ಯಕ್ರಮ ಇದಾಗಿತ್ತು.

ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಅನಂತ ಎಸ್. ಮಠದ್ ಅವರು ಕ್ಯಾನ್ಸರ್ ರೋಗದ ಆರಂಭಿಕ ಲಕ್ಷಣಗಳು, ರೋಗದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ, ತಡೆಗಟ್ಟುವ ಕ್ರಮಗಳು ಹಾಗೂ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆಯುವುದು ಅತ್ಯಂತ ಮುಖ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಆಯ್ಕೆಯಾದ ದಿವ್ಯಾಂಗರು ಹಾಗೂ ಅಶಕ್ತ ಫಲಾನುಭವಿಗಳಿಗೆ ಮಾಸಿಕ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಯಿತು. ನಿರಂತರವಾಗಿ ನಡೆಯುತ್ತಿರುವ ಇಂತಹ ಸೇವಾ ಕಾರ್ಯಕ್ರಮಗಳು ಅಗತ್ಯವಿರುವ ಕುಟುಂಬಗಳಿಗೆ ನೆರವಾಗುವುದರ ಜೊತೆಗೆ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತಿವೆ.

ಕಾರ್ಯಕ್ರಮವನ್ನು ಸಮಿತಿಯ ಸಂಚಾಲಕ ಕೆ. ವಿಜಯ ಕೋಡವೂರು ಉದ್ಘಾಟಿಸಿದರು. MCKS ಫೌಂಡೇಶನ್‌ನ ನಿಧಿ, ಜಿಲ್ಲಾ ಆಸ್ಪತ್ರೆಯ ಹೆಲ್ತ್ ಇನ್ಸ್‌ಪೆಕ್ಟರ್ ಮಂಜುನಾಥ್, ಆಪ್ತ ಸಮಾಲೋಚಕ ಮನು, ಮಹಿಳಾ ಸಮಿತಿ ಅಧ್ಯಕ್ಷೆ ಗುಣವತಿ ಕೋಡವೂರು, ಅಶೋಕ್ ಶೆಟ್ಟಿಗಾರ್, ಅಮಿತ್ ಗರ್ಡೇ ಹಾಗೂ ಓಸ್ ವೇಲ್ಡ್ ಪೇರರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತು ಮಾಹಿತಿ ಪಡೆದುಕೊಂಡ ಫಲಾನುಭವಿಗಳು ಹಾಗೂ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು. ಆರೋಗ್ಯ ಜಾಗೃತಿ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ನೆರವು ನೀಡುವ ಕಾರ್ಯಗಳನ್ನು ಮುಂದುವರಿಸುವ ಅಗತ್ಯವನ್ನು ಗಣ್ಯರು ಒತ್ತಿ ಹೇಳಿದರು.

ಸರ್ವೋತ್ತಮ ಹೆರ್ಗ ಹಾಗೂ ಜಯ ಪೂಜಾರಿ ಸ್ವಾಗತಿಸಿದರು. ಹರೀಶ್ ಧನ್ಯವಾದ ಸಮರ್ಪಿಸಿದರು.