ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಮನವಿಗೆ ಸ್ಪಂದನೆ

ಉಡುಪಿ: ಕೊಳಲಗಿರಿ–ಮಣಿಪಾಲ ಸಂಪರ್ಕಿಸುವ ಪ್ರಮುಖ ರಸ್ತೆಯ ಪರಂಪಳ್ಳಿ ಸೇತುವೆ ಬಳಿಯಿದ್ದ ಅಪಾಯಕಾರಿ ಹೊಂಡಗಳು ಹಾಗೂ ರಸ್ತೆಗೆ ಚಾಚಿಕೊಂಡಿದ್ದ ಪೊದೆಗಳನ್ನು ಉಪ್ಪೂರು ಗ್ರಾಮ ಪಂಚಾಯಿತಿ ವತಿಯಿಂದ ತೆರವುಗೊಳಿಸಲಾಗಿದೆ.
ಈ ರಸ್ತೆಯಲ್ಲಿ ದಿನದ 24 ಗಂಟೆಯೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸೇತುವೆಯ ಬುಡದಲ್ಲಿ ಬೃಹತ್ ಗಾತ್ರದ ಐದಾರು ಹೊಂಡಗಳು ನಿರ್ಮಾಣಗೊಂಡಿದ್ದವು. ಅಲ್ಲದೆ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿದ್ದ ಪೊದೆಗಳು ರಸ್ತೆಗೆ ಚಾಚಿಕೊಂಡಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುವುದರ ಜತೆಗೆ ಅಪಘಾತದ ಭೀತಿಯೂ ಎದುರಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಹಾಗೂ ಕೆಎಂಸಿ ಕಡೆಗೆ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳು, ಮಹಿಳಾ ಸಿಬ್ಬಂದಿ, ರೋಗಿಗಳು ಸೇರಿದಂತೆ ಸಾರ್ವಜನಿಕರು ಈ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಅವರು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರು. ಅಪಾಯಕಾರಿ ಹೊಂಡಗಳನ್ನು ಮುಚ್ಚಿ, ರಸ್ತೆಗೆ ಚಾಚಿಕೊಂಡಿರುವ ಪೊದೆಗಳನ್ನು ತೆರವುಗೊಳಿಸುವಂತೆ ಪತ್ರಿಕೆ ಹಾಗೂ ದೂರವಾಣಿ ಮೂಲಕ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಉಪ್ಪೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಮಾಜಿ ಉಪಾಧ್ಯಕ್ಷರು ಸ್ಥಳಕ್ಕೆ ಗಮನಹರಿಸಿ ಹೊಂಡಗಳನ್ನು ಮುಚ್ಚುವ ಮತ್ತು ರಸ್ತೆಯ ಬದಿಯ ಪೊದೆಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕೊಳಲಗಿರಿ–ಮಣಿಪಾಲ ಸಂಪರ್ಕಿಸುವ ಈ ರಸ್ತೆಯನ್ನು ಈ ಹಿಂದೆ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಜಿಲ್ಲಾಡಳಿತದ ವಿಶೇಷ ಮುತುವರ್ಜಿಯಿಂದ ಅಗಲೀಕರಣಗೊಳಿಸಿ ಜಲ್ಲಿಕಲ್ಲು ಹಾಕಲಾಗಿತ್ತು. ಆದರೆ ಜಲ್ಲಿಕಲ್ಲಿನ ಕಾರಣದಿಂದ ರಸ್ತೆಯಲ್ಲಿ ಧೂಳು ಹೆಚ್ಚಾಗಿ, ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ ರಸ್ತೆಗೆ ಶೀಘ್ರವೇ ಡಾಂಬರೀಕರಣ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಅವರು ಸಾರ್ವಜನಿಕರ ಪರವಾಗಿ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಸತೀಶ್ ಪೂಜಾರಿ ಕೀಳಂಜಿ ಅವರ ನಿಸ್ವಾರ್ಥ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

