ತ್ರಿಶಾ ಶಿಕ್ಷಣ ಸಂಸ್ಥೆಯ “ತ್ರಿಶಾ ದಿನ” ಆಚರಣೆ ಹಾಗೂ ತ್ರಿಶಾ ವತಿಯಿಂದ ಮಂಗಳೂರಿನಲ್ಲಿ ಗಣ್ಯರಿಗೆ ಸನ್ಮಾನ

0
5

ಮಂಗಳೂರು : ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ಶ್ರೇಷ್ಠತೆಯಲ್ಲಿ ತ್ರಿಶಾ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ 28 ವರ್ಷಗಳ ಸಮರ್ಪಿತ ಸೇವೆಯನ್ನು ಸ್ಮರಿಸುವ ಸಲುವಾಗಿ ‘ತ್ರಿಶಾ ದಿನ’ ಆಚರಣೆಯನ್ನು ಆ.10ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರಿನ ಬಲ್ಮಠದ ಡಾನ್ ಬೋಸ್ಕೋ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಶಿಕ್ಷಣ, ವೈದ್ಯಕೀಯ, ಯಕ್ಷಗಾನ, ಕ್ರೀಡೆ, ನೃತ್ಯ, ನಾಟಕ, ವಾಣಿಜ್ಯ, ಉದ್ಯಮ ಹಾಗೂ ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಹಾಗೂ ಸೇವೆ ಸಲ್ಲಿಸಿರುವ ಗಣ್ಯರನ್ನು ಸನ್ಮಾನಿಸಲಾಗುವುದು.

ತ್ರಿಶಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ಅವರು ಗಣ್ಯ ಅತಿಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ತ್ರಿಶಾ ಗ್ರೂಪ್ ಇನ್ಸ್ಟಿಟ್ಯೂಷನ್ಸ್‌ನ ಅಕಾಡೆಮಿಕ್ ಅಡ್ವೈಸರ್ ಡಾ. ನಾರಾಯಣ ಕಾಯರ್ ಕಟ್ಟೆ, ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಪ್ರೊ. ಮಂಜುನಾಥ ಕಾಮತ್ ಎಂ., ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಪ್ರಭಾ ಎಂ. ಹಾಗೂ ಗ್ರಂಥಪಾಲಕ ಮತ್ತು ಮಾಧ್ಯಮ ಉಸ್ತುವಾರಿ ಪ್ರಭಾಕರ್ ಕೊಠಾರಿ ಮಾಹಿತಿ ನೀಡಿದರು.

ಸನ್ಮಾನಿತರ ಪಟ್ಟಿಯಲ್ಲಿ ಎಸ್‌ಡಿಎಂ ಕಾಲೇಜು ಎಂ.ಬಿ.ಎ. ಮಂಗಳೂರಿನ ಮಾಜಿ ನಿರ್ದೇಶಕ ಡಾ. ದೇವರಾಜ್ ಕೆ., ಕೆಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈತ್ರೇಯ ಎ., ಯಕ್ಷಗಾನ ಕಲಾವಿದ ಯಕ್ಷಗುರು ರಾಕೇಶ್ ರೈ ಅಡ್ಕ, ವೈದ್ಯಕೀಯ ಕ್ಷೇತ್ರದ ಡಾ. ಮಧುಸೂದನ್ ಇ., ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀಶ್ರೀಮಾ ಪ್ರಿಯದರ್ಶಿನಿ, ಭಾರತೀಯ ಚಲನಚಿತ್ರ ನಟಿ ಹಾಗೂ ರಂಗಭೂಮಿ ಕಲಾವಿದೆ ಶ್ರೀರೂಪಾ ರ್ಕಾಡಿ ಸೇರಿದ್ದಾರೆ.

ಇದರೊಂದಿಗೆ ಉಳ್ಳಾಲದ ಮಾರುತಿ ಜನಸೇವಾ ಸಂಘದ ಅಧ್ಯಕ್ಷ ಅನಿಲ್ ಚರಣ್, ಚಾರ್ಟರ್ಡ್ ಅಕೌಂಟೆಂಟ್ ಸಿಎ ಶಾಂತರಾಮ ಶೆಟ್ಟಿ, ಭಾರತೀಯ ನೌಕಾಪಡೆಯ ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ ವಿಕ್ರಮದತ್ತ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ‘ನಮ್ಮ ಕುಡ್ಲ’ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕದ್ರಿ ಶ್ರೀ ನವನೀತ್ ಶೆಟ್ಟಿ ಅವರನ್ನೂ ಸನ್ಮಾನಿಸಲಾಗುವುದು.

ತ್ರಿಶಾ ಶಿಕ್ಷಣ ಸಂಸ್ಥೆಗಳ 28 ವರ್ಷಗಳ ಶೈಕ್ಷಣಿಕ ಪಯಣವನ್ನು ಸ್ಮರಿಸುವುದರ ಜೊತೆಗೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಬೋಧಕ ಸಿಬ್ಬಂದಿ, ಹಿತೈಷಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.