ಬಂಟ್ವಾಳ : ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಾಂಧಿನಗರ ಗ್ರಾಮ ಪಂಚಾಯಿತಿ ಸಮೀಪ ರಸ್ತೆಗೆ ಅಡ್ಡವಾಗಿ ತೆಂಗಿನ ಮರ ಉರುಳಿದ ಪರಿಣಾಮ ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದು ಕಾರು ಹಾನಿಗೊಳಗಾದ ಘಟನೆ ನಡೆದಿದೆ.
ಅವಘಡದ ವೇಳೆ ಕಾರು ಚಾಲಕರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲ ಘಟಕದ ಸದಸ್ಯರು ಸ್ಥಳಕ್ಕೆ ಧಾವಿಸಿ, ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್ ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ತೆಂಗಿನ ಮರ ಹಾಗೂ ಹಾನಿಗೊಳಗಾದ ಮೂರು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ವಾಹನ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.

ಸ್ಥಳೀಯರು ಶೌರ್ಯ ವಿಪತ್ತು ನಿರ್ವಹಣಾ ಘಟಕ, ವಿದ್ಯುತ್ ಇಲಾಖೆ ಸಿಬ್ಬಂದಿ ಹಾಗೂ ಸಹಕರಿಸಿದ ಗ್ರಾಮಸ್ಥರ ತ್ವರಿತ ಕಾರ್ಯಾಚರಣೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

