
ಉಡುಪಿ : ಜೈಲು ವಾರ್ಡನ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 40,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಫಾನ್ ಹುಸೇನ್ ಅಲಿಯಾಸ್ ರಜಾಕ್ ಶಿಕ್ಷೆಗೆ ಒಳಗಾದ ಅಪರಾಧಿ. ಸಫಾನ್ ಹುಸೇನ್ನನ್ನು ಏಪ್ರಿಲ್, 2026ರಲ್ಲಿ ಬಾಡಿ ವಾರಂಟ್ ಆಧಾರದ ಮೇಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿ ಮೇಲಿನ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಸೆ. 28ರಂದು ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 40,000 ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ
2011ರಲ್ಲಿ ಅಂಜಾರು ಗ್ರಾಮದಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದ 1 ನೇ ಬ್ಯಾರಕ್ನ ಎದುರಿನ ವರಾಂಡದಲ್ಲಿ ಜೈಲು ವಾರ್ಡನ್ ಕರ್ತವ್ಯದಲ್ಲಿದ್ದು, ಬಂಧಿಗಳಿಗೆ ತಮ್ಮ ತಮ್ಮ ಬ್ಯಾರಕ್ಗಳಿಗೆ ಹೋಗುವಂತೆ ಸೂಚಿಸಿದಾಗ, ಅಡಿಗೆ ಕೋಣೆಯ ಎದುರಲ್ಲಿದ್ದ ಸಫಾನ್ ಹುಸೇನ್, ವಾರ್ಡನ್ಗೆ ಕೊಲೆ ಬೆದರಿಕೆಯೊಡ್ಡಿ ಎಡ ಕೆನ್ನೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 2012ರಲ್ಲಿ ದೋಷಾರೋಪಣ ಪತ್ರ ಸಲ್ಲಿಸಿದ್ದರು. 2013ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಹೀಗಾಗಿ ನ್ಯಾಯಾಲಯವು 2022ರಲ್ಲಿ ಕೇಸ್ ಅನ್ನು ಎಲ್.ಪಿ.ಸಿ ಪ್ರಕರಣವನ್ನಾಗಿ ದಾಖಲಿಸಿಕೊಂಡಿತ್ತು.
