ಪದವಿಯೊಂದಿಗೆ ಮಾನವೀಯ ಗುಣವನ್ನು ಬೆಳೆಸಿಕೊಳ್ಳಿ – ಡಾ. ಮಹಾಬಲೇಶ್ವರ ರಾವ್

0
14

ಕೇವಲ ಪದವಿ ಪಡೆಯುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಸಾಕಷ್ಟು ಕೌಶಲ್ಯಗಳ ತರಬೇತಿಯನ್ನು ಪಡೆದಿರಬೇಕು. ಶೈಕ್ಷಣಿಕ ಪಠ್ಯದೊಂದಿಗೆ ವರ್ತಮಾನ ಕಾಲದ ಎಲ್ಲಾ ವಿದ್ಯಾಮಾನಗಳ ಅರಿವು ವಿದ್ಯಾರ್ಥಿಗಳಿಗಿರಬೇಕು. ಸಾಮರ್ಥ್ಯ ಸ್ಥಾಪಿಸಿಕೊಳ್ಳುವ ಮೂಲಕ ವೃತ್ತಿ ಕೌಶಲ್ಯದೊಂದಿಗೆ ಶ್ರದ್ಧೆವಹಿಸಿ ದುಡಿದರೆ ಉನ್ನತ ಸ್ಥಾನಗಳು ದೊರೆಯುತ್ತವೆ.

ಇದರೊಂದಿಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಡಾ. ರಾವ್ ಕರೆ ನೀಡಿದರು. ಅವರು ಉಡುಪಿಯ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಅಂತಿಮ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮೂರು ದಿನಗಳ ಸನಿವಾಸ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ದೇವಾನಂದ ಉಪಾಧ್ಯಾಯ ಉದ್ಯೋಗ ಪಡೆದು ಮೇಲಧಿಕಾರಿಗಳ ಮೆಚ್ಚುಗೆಗಳಿಸುವುದಕ್ಕೆ ಮೊದಲ ಭೇಟಿಯಲ್ಲಿಯೇ ಅವರ ಮೇಲೆ ನಾವು ಬೀರುವ ಪ್ರಭಾವ, ಹಿತ-ಮಿತ ಮಾತು ಹಾಗು ವಿನೀತ ಭಾವ ಬಹಳ ಮುಖ್ಯವಾದ ಸಂಗತಿಗಳಾಗಿವೆ ಎಂದರು.

ಅಭ್ಯಾಗತರಾಗಿ ಭಾಗವಹಿಸಿದ್ದ ರೋಟರಿ ಸಹಾಯಕ ಗವರ್ನರ್ ಹೇಮಂತ್ ಯು. ಕಾಂತ್ ಕಲಾರಂಗ ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸವನ್ನು ನೋಡಿ ಬೆರಗಾಗಿದ್ದೇನೆ, ಆರ್ಥಿಕವಾಗಿ ಅಸಹಾಯಕರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವುದಲ್ಲದೆ, ಇಂತಹ ಶೈಕ್ಷಣಿಕ ಶಿಬಿರ ಏರ್ಪಡಿಸಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವ ಕೆಲಸ ಅಭಿನಂದನೀಯ ಎಂದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ ನಾಯ್ಕ್ ಜ್ಞಾನ, ಕೌಶಲ್ಯ ಮೌಲ್ಯಗಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ರೂಢಿಸಿಕೊಳ್ಳಲೇ ಬೇಕಾದ ಸಂಗತಿಗಳಾಗಿವೆ ಎಂದರು.

ಶಿಬಿರದ ನಿರ್ದೇಶಕ ಹುಬ್ಬಳ್ಳಿಯ ಮೈ ಲೈಫ್‍ನ ಸಂಸ್ಥಾಪಕ ಪ್ರವೀಣ್ ವಿ. ಗುಡಿಯವರು ಶಿಬಿರದಲ್ಲಿ ವಿದ್ಯಾರ್ಥಿಗಳು ಪಡೆಯಲಿರುವ ತರಬೇತಿಯ ಅಂಶಗಳನ್ನು ಪ್ರಸ್ತಾಪಿಸಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರುಗಳಾದ ಸುದರ್ಶನಮೂರ್ತಿ, ಯು.ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್, ಅನಂತರಾಜ್ ಉಪಾಧ್ಯ,ಉಮೇಶ ಭಟ್, ಆರ್. ವಸಂತ, ಎನ್. ರಾಮ ಭಟ್,ಎ. ನಾಗಭೂಷಣ ಭಟ್ ಉಪಸ್ಥಿತರಿದ್ದರು.