ಉಪ್ಪಿನಂಗಡಿಯಲ್ಲಿ ಖೋಟಾನೋಟು ಜಾಲ ಭೇದ; ಯಂತ್ರ ಸಹಿತ 7 ಮಂದಿ ವಶ
ಉಪ್ಪಿನಂಗಡಿ, ಜು. 16: ಖೋಟಾನೋಟು ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ, ಖೋಟಾನೋಟು ಮುದ್ರಣಕ್ಕೆ ಬಳಸುತ್ತಿದ್ದ ಯಂತ್ರ, ಮುದ್ರಿತ ನಕಲಿ ನೋಟುಗಳನ್ನು ವಶಪಡಿಸಿಕೊಂಡು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಜುಲೈ 15ರ ತಡರಾತ್ರಿ ಕಣಿಯೂರು ಗ್ರಾಮದ ಪದ್ಮುಂಜ–ಕೊರಿಂಜ ಸಮೀಪದ ಅಡೆಂಜ ಪ್ರದೇಶದಲ್ಲಿರುವ ಬಾಡಿಗೆ ಕಟ್ಟಡದ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಖೋಟಾನೋಟು ತಯಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಖೋಟಾನೋಟು ತಯಾರಿಕೆಗೆ ಬಾಡಿಗೆ ಕಟ್ಟಡ ಒದಗಿಸಿದ್ದ ಸ್ಥಳೀಯ ವ್ಯಕ್ತಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮುದ್ರಿಸಲಾದ ಖೋಟಾನೋಟುಗಳು ಹಾಗೂ ಅವುಗಳ ತಯಾರಿಕೆಗೆ ಬಳಸಲಾಗುತ್ತಿದ್ದ ಪ್ರಿಂಟಿಂಗ್ ಯಂತ್ರ ಮತ್ತು ಇತರೆ ಉಪಕರಣಗಳನ್ನು ಸಹ ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

