ಕೇರಳ ಕನ್ನಡ ಅಕಾಡೆಮಿ ಸ್ಥಾಪನೆಗೆ ಆಗ್ರಹ : ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಮನವಿ

0
9

ಕಾಸರಗೋಡು : ಕೇರಳ ರಾಜ್ಯದಲ್ಲಿರುವ ಕನ್ನಡಿಗರ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕಾಸರಗೋಡಿನಲ್ಲಿ ಪ್ರತ್ಯೇಕ ಅಸ್ತಿತ್ವವುಳ್ಳ “ಕೇರಳ ಕನ್ನಡ ಅಕಾಡೆಮಿ” ಸ್ಥಾಪಿಸಬೇಕು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಕೇರಳ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ.ಸತಿಸನ್ ಅವರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ್‌ ಕಾಸರಗೋಡು ಮನವಿ ಸಲ್ಲಿಸಿದ್ದಾರೆ.

ಕೇರಳ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಮಗ್ರ ಸಾಂಸ್ಕೃತಿಕ ಕನ್ನಡೀಕರಣ ಯೋಜನೆ ರೂಪಿಸಬೇಕು. ಜೊತೆಗೆ ಮುಂದಿನ ರಾಜ್ಯ ಬಜೆಟ್‌ನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿ ಮೊತ್ತದ ಸಾಂಸ್ಕೃತಿಕ ನಿಧಿಯನ್ನು ಸ್ಥಾಪಿಸಿ ಪೋಷಿಸಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆದ ಕೇರಳ ರಾಜ್ಯ ಕನ್ನಡ ಸಮ್ಮೇಳನ ಹಾಗೂ ಕೇರಳ-ಕರ್ನಾಟಕ ಉತ್ಸವದ ಬಹಿರಂಗ ಅಧಿವೇಶನಗಳಲ್ಲಿ ಈಗಾಗಲೇ ಏಳು ಬಾರಿ ಈ ಕುರಿತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ, 2026ರ ನವೆಂಬರ್ 7 ಮತ್ತು 8ರಂದು ಕನ್ನಡ ಗ್ರಾಮದಲ್ಲಿ ನಡೆಯಲಿರುವ “ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ – 2026”, “ಕೇರಳ-ಕರ್ನಾಟಕ ಉತ್ಸವ” ಹಾಗೂ “ಕೇರಳ ರಾಜ್ಯ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ” ಕಾರ್ಯಕ್ರಮಗಳಿಗೆ ಕೇರಳ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ಘಾಟಕರಾಗಿ ಆಹ್ವಾನಿಸಲು ತೀರ್ಮಾನಿಸಲಾಗಿದೆ. ಇದೇ ಸಮಾರಂಭದಲ್ಲಿ “ಕೇರಳ ಕನ್ನಡ ಅಕಾಡೆಮಿ”ಯನ್ನು ಅಧಿಕೃತವಾಗಿ ಉದ್ಘಾಟಿಸುವ ಉದ್ದೇಶವೂ ಇದೆ ಎಂದು ತಿಳಿಸಲಾಗಿದೆ.

ಈ ಬೇಡಿಕೆಗೆ ಬೆಂಬಲವಾಗಿ ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ್‌ ಉನ್ನಿತನ್, ಮಂಜೇಶ್ವರ ಶಾಸಕ ಎ.ಕೆ.ಎಮ್.ಅಸ್ತ್ರಫ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ.

ಈ ಕುರಿತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ಘಟಕ, ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಹಾಗೂ ಕೇರಳ-ಕರ್ನಾಟಕ ಉತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here