ಸರ್ಕಾರಿ ಮಹಿಳಾ ಆಸ್ಪತ್ರೆ ಮರುವಿನ್ಯಾಸಕ್ಕೆ ಅನುದಾನ ಒದಗಿಸಲು ಆಗ್ರಹ

0
27

ಉಡುಪಿ : ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಹಾಗೂ ಮಕ್ಕಳ ಸರಕಾರಿ ಆಸ್ಪತ್ರೆ -ಕಟ್ಟಡ ವಿದೇಶಿ ಮಾದರಿಯಲ್ಲಿ ನಿರ್ಮಾಣಗೊಂಡಿದ್ದು, ಸರ್ಕಾರಕ್ಕೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಮೂರು ಮಹಡಿಗಳನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ತಜ್ಞರಿಂದ ವರದಿ ಪಡೆಯಲು ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು ಎಂದು ಶಾಸಕ ಯಶ್ಪಾಲ್​ ಸುವರ್ಣ ಆಗ್ರಹಿಸಿದರು.

ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಹಾಗೂ ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿ, ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 200 ಬೆಡ್​ ಸಾಮರ್ಥ್ಯದ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಅಗತ್ಯ ಸಿಬ್ಬಂದಿ ನಿಯೋಜನೆಗೆ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗುವುದು. ಪ್ರಸ್ತುತ 70 ಬೆಡ್​ಗಳನ್ನು ಬಳಸಿಕೊಂಡು ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

ಆದರೆ ದೊಡ್ಡ ಕಟ್ಟಡದ ನಿರ್ವಹಣೆ ವೆಚ್ಚವೇ ಅಧಿಕವಾಗಿದೆ. ಅನೇಕ ಕಡೆಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಇಲಿ ಮತ್ತು ಹೆಗ್ಗಣಗಳ ಕಾಟ ಅಧಿಕವಾಗಿದೆ. ಯಂತ್ರೋಪಕರಣಗಳು ವಿದೇಶದಿಂದ ಆಮದಾಗಿದ್ದು, ಇದರ ನಿರ್ವಹಣೆಯೂ ದುಬಾರಿಯಾಗಿದೆ. ಆಸ್ಪತ್ರೆಯ ಒಟ್ಟು ವಾರ್ಷಿಕ ನಿರ್ವಹಣೆಗೆ 60 ಲಕ್ಷ ರೂ. ಅಗತ್ಯವಿದೆ. ಈ ಬಗ್ಗೆ ಹೊಸ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಸರ್ಜನ್​ ಡಾ. ಅಶೋಕ್​, ಆಸ್ಪತ್ರೆ ಉಪ ವೈದ್ಯಾಧಿಕಾರಿ ಸಂದೀಪ್​ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here