ಉಡುಪಿ : ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ, ತಡರಾತ್ರಿ ಅವಧಿ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದ ಡಿಸಿ ಕಚೇರಿ ರಸ್ತೆಯ ಖಾಸಗಿ ಹೋಟೆಲ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 1 ರಂದು ಮುಂಜಾನೆ ಸುಮಾರು 2:30 ಗಂಟೆಯ ವೇಳೆಗೆ ಖಾಸಗಿ ಹೋಟೆಲ್ನಲ್ಲಿ ನಿಯಮ ಬಾಹಿರವಾಗಿ ಅವಧಿ ಮೀರಿ ಗ್ರಾಹಕರಿಗೆ ಊಟದ ವ್ಯವಸ್ಥೆ ಹಾಗೂ ಪಾರ್ಸೆಲ್ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಪೊಲೀಸರು ಹೋಟೆಲ್ ತೆರೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ದೃಶ್ಯಾವಳಿಗಳನ್ನು ವೀಡಿಯೊ ಚಿತ್ರೀಕರಣ ಮಾಡಿಕೊಂಡು, ತಕ್ಷಣವೇ ಹೋಟೆಲ್ ಮುಚ್ಚಿಸಿದ್ದಾರೆ.
ಹೋಟೆಲ್ ವ್ಯವಸ್ಥಾಪಕರಿಗೆ ಈಗಾಗಲೇ ಹಲವಾರು ಬಾರಿ ಸರಿಯಾದ ಸಮಯಕ್ಕೆ ಹೋಟೆಲ್ ಬಂದ್ ಮಾಡುವಂತೆ ಪೊಲೀಸರು ಮೌಖಿಕವಾಗಿ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, ಯಾವುದೇ ಸೂಕ್ತ ಪರವಾನಿಗೆ ಪಡೆಯದೆ, ನಿಯಮಗಳನ್ನು ಗಾಳಿಗೆ ತೂರಿ ಹೋಟೆಲ್ ನಡೆಸುತ್ತಿರುವ ಬಗ್ಗೆ ದೂರು ದಾಖಲಿಸಲಾಗಿದೆ.

