ಕೆ.ಜಿ.ರೋಡ್ – ಪೆರ್ಡೂರು ರಾಜ್ಯ ರಸ್ತೆಯ ಅಪಾಯಕಾರಿ ತಿರುವುಗಳು ಸರಿಪಡಿಸಲು ಆಗ್ರಹ

0
14

ಉಡುಪಿ: ಕೆ.ಜಿ.ರೋಡ್–ಪೆರಡೂರು ರಾಜ್ಯ ರಸ್ತೆಯ ಅಭಿವೃದ್ಧಿಗೆ ಈ ಹಿಂದೆ ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಕೀಳಂಜೆ ಅವರ ಹೋರಾಟದ ಫಲವಾಗಿ ಹಲವು ಕಾಮಗಾರಿಗಳು ನಡೆದಿದ್ದವು. ಪೆರಡೂರು ಜಂಕ್ಷನ್‌ನಿಂದ ವಿಶ್ವಬ್ರಾಹ್ಮಣ ಸಭಾಭವನದವರೆಗೆ ರಸ್ತೆ ಅಗಲೀಕರಣ ಹಾಗೂ ನೂತನ ಡಾಮರೀಕರಣ, ರಸ್ತೆ ಬದಿಯ ಚರಂಡಿ ನಿರ್ಮಾಣ, ರಸ್ತೆಗೆ ಬಾಗಿದ್ದ ಗಿಡ-ಗಂಟೆಗಳ ತೆರವು ಮತ್ತು ಸ್ವಚ್ಛತಾ ಕಾರ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡಿದ್ದರು.

ಇದೇ ರೀತಿ ಕೆ.ಜಿ.ರೋಡ್‌ನಿಂದ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ರಸ್ತೆ ಡಾಮರೀಕರಣ ಹಾಗೂ ಅಗತ್ಯ ಸ್ಥಳಗಳಲ್ಲಿ ಸ್ಪೀಡ್ ಬ್ರೇಕರ್‌ಗಳನ್ನೂ ನಿರ್ಮಿಸಲಾಗಿತ್ತು. ಆದಾಗ್ಯೂ, ಈ ರಾಜ್ಯ ರಸ್ತೆಯಲ್ಲಿ ಇನ್ನೂ ಹಲವು ಅಪಾಯಕಾರಿ ತಿರುವುಗಳು ಉಳಿದಿದ್ದು, ಅವುಗಳಿಂದಾಗಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಸತೀಶ್ ಪೂಜಾರಿ ಕೀಳಂಜೆ ಆತಂಕ ವ್ಯಕ್ತಪಡಿಸಿದ್ದಾರೆ.

ಕೀಳಂಜೆ ಬಿ.ವಿ. ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆಯಿಂದ ಹಾವಂಜೆ ಗೋಳಿಕಟ್ಟೆವರೆಗೆ, ಕೊಳಲಗಿರಿ ಹೈಸ್ಕೂಲಿನಿಂದ ಸಾಲ್ಮರ ರೈಲ್ವೆ ಬ್ರಿಡ್ಜ್‌ವರೆಗೆ ಹಾಗೂ ಕುಕ್ಕೆಹಳ್ಳಿ ಜಂಕ್ಷನ್‌ನಿಂದ ಬೆಳ್ಳಂಪಳ್ಳಿ ಜಂಕ್ಷನ್‌ವರೆಗೆ ಇರುವ ತಿರುವುಗಳು ಅಪಾಯಕಾರಿಯಾಗಿವೆ. ವಿಶೇಷವಾಗಿ ಹಾವಂಜೆ ನಾಗಬನ ದೇವಸ್ಥಾನದ ಸಮೀಪ ಹಾಗೂ ಕೀಳಂಜೆ ಶಾಲೆಯ ಬಳಿಯ ತಿರುವುಗಳು ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಕೆ.ಜಿ.ರೋಡ್‌ನಿಂದ ಪೆರಡೂರುವರೆಗೆ ರಸ್ತೆ ಬದಿಯಲ್ಲಿ ಕಸದ ರಾಶಿಗಳು ಕಂಡುಬರುತ್ತಿದ್ದು, ಪೆರಡೂರು, ಕುಕ್ಕೆಹಳ್ಳಿ, ಹಾವಂಜೆ ಹಾಗೂ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನೇಕ ಬೀದಿ ದೀಪಗಳು ಉರಿಯದೇ ಇರುವುದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.

ಅಪಾಯಕಾರಿ ತಿರುವುಗಳಲ್ಲಿ ರಿಫ್ಲೆಕ್ಟರ್‌ ಸ್ಟಿಕ್ಕರ್‌ಗಳನ್ನು ಅಳವಡಿಸುವುದು, ಸೂಕ್ತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸುವುದು, ರಸ್ತೆಯ ಉಬ್ಬು-ತಗ್ಗುಗಳನ್ನು ಸರಿಪಡಿಸುವುದು ಹಾಗೂ ಮಳೆಗಾಲದ ಮುನ್ನ ರಸ್ತೆ ಬದಿಯ ಮರಗಳ ಒಣ ಕೊಂಬೆಗಳನ್ನು ತೆರವುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

ಪೆರಡೂರು ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ, ಕೆಎಂಸಿ ಆಸ್ಪತ್ರೆ ಸೇರಿದಂತೆ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಇರುವುದರಿಂದ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಹಾಗೂ ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ಸಾರ್ವಜನಿಕರು ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here