ಮಾಜಿ ಸೈನಿಕರಿಗಾಗಿ DLSA ವತಿಯಿಂದ ಕಾನೂನು ಅರಿವು ಮತ್ತು ಉಚಿತ ನೆರವು ಕಾರ್ಯಾಗಾರ : ವೀರ್ ಪರಿವಾರ್ ಸಹಾಯತಾ ಯೋಜನಾ – 2025

0
77

ವರದಿ : ಮಂದಾರ ರಾಜೇಶ್ ಭಟ್


ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಾಜಿ ಸೈನಿಕರ ಹಿತರಕ್ಷಣೆ ಮತ್ತು ಅವರಿಗೆ ಕಾನೂನು ಭದ್ರತೆ ಒದಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (DLSA) ಒಂದು ಶ್ಲಾಘನೀಯ ಹೆಜ್ಜೆಯನ್ನಿಟ್ಟಿದೆ.

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಮಾಜಿ ಸೈನಿಕರಿಗಾಗಿ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾನೂನು ಅರಿವು ಅಭಿಯಾನದ ಭಾಗವಾಗಿ, ಮಂಗಳೂರಿನ ಸೈನಿಕ್ ಭವನದಲ್ಲಿ ವಿಶೇಷ ಕಾರ್ಯಾಗಾರವು ಯಶಸ್ವಿಯಾಗಿ ಜರುಗಿತು.

​ NALSA/KLSA/DLSA ಮತ್ತು ಕಾನೂನು ಸವಲತ್ತುಗಳು

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಾಗೂ ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ಜೈಬುನ್ನಿಸ ಇವರ ಮಾರ್ಗದರ್ಶನದಲ್ಲಿ (NALSA) ಹಾಗೂ (KLSA ) ಮಾರ್ಗಸೂಚಿಯಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (DLSA) ಮೂಲಕ ಮಾಜಿ ಸೈನಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಚಯಿಸುವುದಾಗಿತ್ತು. ಸಂವಿಧಾನದ ಆಶಯದಂತೆ, ಯಾವುದೇ ಮಾಜಿ ಸೈನಿಕರು ಆರ್ಥಿಕ ಸಂಕಷ್ಟದಿಂದ ಅಥವಾ ಕಾನೂನು ಅರಿವಿನ ಕೊರತೆಯಿಂದ ನ್ಯಾಯದಿಂದ ವಂಚಿತರಾಗಬಾರದು ಎಂಬುದು ಈ ಯೋಜನೆಯ ಮೂಲ ಮಂತ್ರ.

ಸಿವಿಲ್ ಅಥವಾ ಕ್ರಿಮಿನಲ್ ವ್ಯಾಜ್ಯಗಳಲ್ಲಿ ಸಿಲುಕಿರುವ ಸೈನಿಕರಿಗೆ ಉಚಿತ ವಕೀಲರ ಸೇವೆ, ಕಾನೂನು ಸಲಹೆ ಮತ್ತು ‘ಲೋಕ ಅದಾಲತ್’ ಮೂಲಕ ಶೀಘ್ರವಾಗಿ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವ ಅವಕಾಶಗಳ ಬಗ್ಗೆ ಇಲ್ಲಿ ಸವಿಸ್ತಾರವಾಗಿ ವಿವರಿಸಲಾಯಿತು.

​ ಕಾರ್ಯಕ್ರಮದ ವಿವರ

ದಿನಾಂಕ 05 ಮಾರ್ಚ್ 2026, ಗುರುವಾರ ಪೂರ್ವಾಹ್ನ 11:00 ಗಂಟೆಗೆ ನಡೆದ ಈ ಶಿಬಿರದಲ್ಲಿ ಕಾನೂನು ಸೇವೇಗಳ ಪ್ರಾಧಿಕಾರದ ಪರವಾಗಿ ನ್ಯಾಯವಾದಿ ಶ್ರೀಮತಿ ಪ್ರತಿಮಾ ಎಸ್ ಬಂಗೇರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅವರು ಮಾಜಿ ಸೈನಿಕರ ದೈನಂದಿನ ಜೀವನದಲ್ಲಿ ಎದುರಾಗಬಹುದಾದ ಭೂ ದಾಖಲೆಗಳ ಸಮಸ್ಯೆ, ಕೌಟುಂಬಿಕ ವಿವಾದಗಳು ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಕಾನೂನುಬದ್ಧವಾಗಿ ಎದುರಿಸುವ ಹಾದಿಯನ್ನು ಅತ್ಯಂತ ಸುಗಮವಾಗಿ ಮತ್ತು ಸರಳವಾಗಿ ಮನವರಿಕೆ ಮಾಡಿಕೊಟ್ಟರು.

​ ಸಮಾರಂಭದ ಹಾದಿ

ಕಾರ್ಯಕ್ರಮದ ಆರಂಭದಲ್ಲಿ ಶರತ್ ಭಂಡಾರಿಯವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಗೌರವದ ಸಂಕೇತವಾಗಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ ಅವರು ಗಣ್ಯರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಹಲವಾರು ಮಾಜಿ ಸೈನಿಕರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ತಮಗಿದ್ದ ಕಾನೂನಾತ್ಮಕ ಸಂಶಯಗಳಿಗೆ ತಜ್ಞರಿಂದ ನೇರ ಉತ್ತರ ಪಡೆದುಕೊಂಡರು. ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀ ಸುಧೀರ್ ಪೈ ಅವರು ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮ ಸುಸಂಪನ್ನಗೊಂಡಿತು.

“ದೇಶದ ಗಡಿ ಕಾಯುವಲ್ಲಿ ತಮ್ಮ ಯೌವನವನ್ನು ಧಾರೆ ಎರೆದ ಮಾಜಿ ಸೈನಿಕರು, ನಿವೃತ್ತಿಯ ನಂತರ ಕಾನೂನು ಸಂಘರ್ಷಗಳ ಸುಳಿಯಲ್ಲಿ ಸಿಲುಕಿ ಕಂಗೆಡಬಾರದು ಎಂಬುದು ಈ ಕಾರ್ಯಾಗಾರದ ಮೂಲ ಆಶಯ. ಸಮವಸ್ತ್ರ ಕಳಚಿದ ಮೇಲೂ ಸೈನಿಕನಿಗೆ ಈ ನಾಡಿನ ಕಾನೂನು ವ್ಯವಸ್ಥೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಭರವಸೆಯನ್ನು ಮೂಡಿಸಿದ ಈ ಕಾರ್ಯಕ್ರಮವು, ಕೇವಲ ಮಾಹಿತಿಯ ಹಂಚಿಕೆಯಾಗದೆ, ರಾಷ್ಟ್ರ ರಕ್ಷಕರಿಗೆ ಸಲ್ಲಿಸಿದ ಗೌರವಾನ್ವಿತ ‘ನ್ಯಾಯದ ನಮನ’ವಾಗಿ ಮೂಡಿಬಂತು .”

LEAVE A REPLY

Please enter your comment!
Please enter your name here