ಮಂಗಳೂರು : ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಂಸ್ಥೆಯ ವಾರ್ಷಿಕ ಆಡಳಿತ ಮಂಡಳಿ ಚುನಾವಣೆ ಸೆ.27ರಂದು ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಡಾ. ವಿಕಾಸ್ ಅವರ ನೇತೃತ್ವದಲ್ಲಿ ನಡೆಯಿತು.
ನಗರದ ಖ್ಯಾತ ಮೂತ್ರರೋಗ ತಜ್ಞ ಹಾಗೂ ಶಸ್ತ್ರಚಿಕಿತ್ಸಕರಾದ, ವೆನ್‌ಲಾಕ್ ಆಸ್ಪತ್ರೆಯ ಮೂತ್ರರೋಗ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಅವರು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದಲ್ಲಿ ಅ.23 ಮತ್ತು 24ರಂದು ನಡೆಯಲಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಡಾ. ಪೂಜಾರಿ ಅವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಪ್ರಸ್ತುತ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಡಾ. ಪೂಜಾರಿ ಅವರು ರಾಜ್ಯಮಟ್ಟದ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ವಿವಿಧ ಗೌರವಗಳಿಗೆ ಪಾತ್ರರಾಗಿದ್ದಾರೆ. ದೃಶ್ಯಮಾಧ್ಯಮ ಕ್ಷೇತ್ರದ ಸುವರ್ಣಕನ್ನಡ ನ್ಯೂಸ್ ವಾಹಿನಿಯ ಹೆಲ್ತ್‌ಕೇರ್ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ.
ಭಾರತೀಯ ವೈದ್ಯಕೀಯ ಸಂಘವು ರಾಜ್ಯದಲ್ಲಿ 175 ಶಾಖೆಗಳನ್ನು ಹೊಂದಿದ್ದು, ಸುಮಾರು 38 ಸಾವಿರ ಸದಸ್ಯರನ್ನು ಒಳಗೊಂಡಿದೆ. ರಾಜ್ಯ ಉಪಾಧ್ಯಕ್ಷರಾಗಿ ಡಾ. ಪೂಜಾರಿ ಅವರ ಆಯ್ಕೆಗೆ ವೈದ್ಯಕೀಯ ಕ್ಷೇತ್ರದ ಗಣ್ಯರು ಹಾಗೂ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ.

