ವೆಲೆನ್ಸಿಯಾದಲ್ಲಿ ತಡೆಗೋಡೆ ಕುಸಿತ ; ಸ್ಥಳಕ್ಕೆ ಭೇಟಿ ನೀಡಿದ ಐವನ್ ಡಿ’ಸೋಜಾ

0
13

ಮಂಗಳೂರು : ಪಳ್ನೀರ್ ವಾರ್ಡ್‌ನ ವೆಲೆನ್ಸಿಯಾ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆ ಹಾಗೂ ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಡೈನಸ್ಟಿ ಅಪಾರ್ಟ್‌ಮೆಂಟ್ ಸಮೀಪದ ತಡೆಗೋಡೆ ಕುಸಿದು ಸುಮಾರು ₹10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರಂತರ ಮಳೆಯಿಂದ ಒಳಚರಂಡಿಯ ನೀರು ಸಮೀಪದ ಖಾಲಿ ಜಾಗದಲ್ಲಿ ಶೇಖರಣೆಯಾಗಿ ಮಣ್ಣು ಸಡಿಲಗೊಂಡ ಪರಿಣಾಮ, 120ಕ್ಕೂ ಅಧಿಕ ಕುಟುಂಬಗಳು ವಾಸಿಸುವ ಡೈನಸ್ಟಿ ಅಪಾರ್ಟ್‌ಮೆಂಟ್ ಬದಿಯ ತಡೆಗೋಡೆ ಕುಸಿದಿದೆ. ಇದರಿಂದ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಆತಂಕ ಮನೆಮಾಡಿದ್ದು, ಗಣನೀಯ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದೆ.

ಈ ಕುರಿತು ಸ್ಥಳೀಯರು ಹಲವು ಬಾರಿ ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರೂ, ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸದಿರುವುದೇ ಈ ಅವಘಡಕ್ಕೆ ಪ್ರಮುಖ ಕಾರಣವಾಗಿದೆ ಎಂದು ಐವನ್ ಡಿ’ಸೋಜಾ ಆರೋಪಿಸಿದರು.

ಸ್ಥಳ ಪರಿಶೀಲನೆ ಬಳಿಕ ಅವರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರದೇಶವನ್ನು ತಕ್ಷಣ ಸುರಕ್ಷಿತಗೊಳಿಸುವಂತೆ ಹಾಗೂ ತಾತ್ಕಾಲಿಕ ಕ್ರಮಗಳ ಜೊತೆಗೆ ಶಾಶ್ವತ ತಡೆಗೋಡೆ ಮತ್ತು ಒಳಚರಂಡಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವಂತೆ ಒತ್ತಾಯಿಸಿದರು.

ನಗರದ ಹಲವೆಡೆ ಸಮರ್ಪಕ ಮಳೆನೀರು ಹರಿವು ವ್ಯವಸ್ಥೆಯ ಕೊರತೆಯಿಂದ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸಾರ್ವಜನಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಕ್ರಮ ಕೈಗೊಳ್ಳಬೇಕು ಎಂದು ಐವನ್ ಡಿ’ಸೋಜಾ ಆಗ್ರಹಿಸಿದರು.