ಮೂಡುಬಿದಿರೆ : ಚಾಲಕನಿಗೆ ನಿದ್ದೆ ಮಂಪರು ಬಂದ ಪರಿಣಾಮ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ವಿರುದ್ಧ ದಿಕ್ಕಿಗೆ ಚಲಿಸಿ ಸೈಡ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತ ಘಟನೆ ಭಾನುವಾರ ಸಂಜೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿತೋಟ ಕ್ರಾಸ್ ಬಳಿ ಸಂಭವಿಸಿದೆ.
ಸಂಜೆ ಸುಮಾರು 6.30ರ ವೇಳೆಗೆ ಪಾಲಡ್ಕ ಕಡೆಯಿಂದ ಬೆಳ್ಮನ್ ಕಡೆಗೆ ತೆರಳುತ್ತಿದ್ದ ಕೆಂಪು ಬಣ್ಣದ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕನಿಗೆ ಏಕಾಏಕಿ ನಿದ್ದೆ ಮಂಪರು ಬಂದಿದ್ದು, ಕಾರಿನ ಮೇಲಿನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಪರಿಣಾಮ ಕಾರು ರಸ್ತೆಯ ವಿರುದ್ಧ ದಿಕ್ಕಿಗೆ ಚಲಿಸಿ ಬಿಳಿತೋಟ ಕ್ರಾಸ್ ದಾಟಿ ರಸ್ತೆ ಬದಿಯಲ್ಲಿದ್ದ ಸೈಡ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಕಾರು ಸೈಡ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೈಡ್ ಕಂಬ ಇಲ್ಲದಿದ್ದರೆ ಕಾರು ರಸ್ತೆ ಬದಿಯಲ್ಲಿದ್ದ ಆಳವಾದ ಕಂದಕಕ್ಕೆ ಉರುಳಿ ಬಿದ್ದು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಇದೇ ವೇಳೆ ಕಾರು ವಿರುದ್ಧ ದಿಕ್ಕಿನಲ್ಲಿ ಬರುತ್ತಿರುವುದನ್ನು ಗಮನಿಸಿದ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಕ್ಷಣಮಾತ್ರದಲ್ಲಿ ವಾಹನವನ್ನು ರಸ್ತೆಯ ಬಲಬದಿಗೆ ತಿರುಗಿಸಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಆತನ ಸಮಯಪ್ರಜ್ಞೆಯಿಂದ ಮತ್ತೊಂದು ಸಂಭವನೀಯ ಅಪಘಾತವೂ ತಪ್ಪಿದೆ. ಘಟನೆಯನ್ನು ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಗಮನಿಸಿದ್ದು, ಕಾರು ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದ ರೀತಿಯನ್ನು ವಿವರಿಸಿದ್ದಾರೆ.
ಒಟ್ಟಿನಲ್ಲಿ ಚಾಲಕನಿಗೆ ಬಂದ ನಿದ್ದೆ ಮಂಪರು ಕ್ಷಣಮಾತ್ರದಲ್ಲಿ ನಾಲ್ಕು ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದರೂ, ರಸ್ತೆ ಬದಿಯ ಸೈಡ್ ಕಂಬವು ಕಾರನ್ನು ತಡೆದು ನಿಲ್ಲಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸೈಡ್ ಕಂಬವೇ ನಾಲ್ಕು ಜೀವಗಳಿಗೆ ರಕ್ಷಣಾ ಕವಚವಾದಂತಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಚಾಲಕರು ದೀರ್ಘ ಪ್ರಯಾಣದ ವೇಳೆ ನಿದ್ದೆ ಅಥವಾ ಆಯಾಸದ ಲಕ್ಷಣ ಕಂಡುಬಂದರೆ ವಾಹನ ಚಾಲನೆ ಮುಂದುವರಿಸದೆ ಸುರಕ್ಷಿತ ಸ್ಥಳದಲ್ಲಿ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

