ಉಡುಪಿ : ಫೇಸ್‌ಬುಕ್‌ನಲ್ಲಿ ಬಂದ ನಕಲಿ ಲಿಂಕ್ ಹಾಗೂ ಆನ್‌ಲೈನ್ ಷೇರು ಹೂಡಿಕೆಯಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ 75 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ₹14,35,724 ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ರಮೇಶ ಶೆಟ್ಟಿ ನೀಡಿದ ದೂರಿನ ಆಧಾರದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಜುಲೈ 29ರಂದು ರಮೇಶ ಶೆಟ್ಟಿ ಅವರ ಫೇಸ್‌ಬುಕ್ ಖಾತೆಗೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೆಸರಿನಲ್ಲಿ ಲಿಂಕ್ ಬಂದಿತ್ತು. ಅದನ್ನು ತೆರೆದಾಗ ವಂಚಕರು ಅವರಿಗೆ ಹೂಡಿಕೆ ಖಾತೆ ಹಾಗೂ ಬಳಕೆದಾರರ ಗುರುತಿನ ಸಂಖ್ಯೆಯನ್ನು ಒದಗಿಸಿದ್ದರು. ಆರಂಭದಲ್ಲಿ ₹40,000 ಹೂಡಿಕೆ ಮಾಡಿದಾಗ ಶೇ. 5ರಷ್ಟು ಲಾಭ ಬಂದಿರುವಂತೆ ತೋರಿಸಿ ಅವರ ವಿಶ್ವಾಸ ಗಳಿಸಿದ್ದರು. ಇದನ್ನು ನಂಬಿದ ರಮೇಶ ಶೆಟ್ಟಿ ಅವರು ಆಗಸ್ಟ್ 18ರಂದು ₹80,000 ಹಾಗೂ ₹50,000 ಸೇರಿದಂತೆ ಹಂತ ಹಂತವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿದ್ದರು.
ಸೆಪ್ಟೆಂಬರ್ 1ರಂದು ಇಎಸ್‌ಡಿಎಸ್ ಸಾಫ್ಟ್‌ವೇರ್ ಸೊಲ್ಯೂಷನ್ಸ್ ಲಿಮಿಟೆಡ್‌ನ ಸಾರ್ವಜನಿಕ ಷೇರು ವಿತರಣೆಯಲ್ಲಿ ತಲಾ ₹272ರಂತೆ 3,400 ಷೇರುಗಳು ಮಂಜೂರಾಗಿದ್ದು, ಒಟ್ಟು ₹9,24,800 ಪಾವತಿಸುವಂತೆ ಸಂದೇಶ ಬಂದಿತ್ತು. ತಾನು ಈ ಷೇರು ವಿತರಣೆಗೆ ಅರ್ಜಿ ಸಲ್ಲಿಸಿಲ್ಲ ಮತ್ತು ಅಷ್ಟೊಂದು ಹಣ ಪಾವತಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅದನ್ನು ರದ್ದುಗೊಳಿಸುವಂತೆ ಮನವಿ ಮಾಡಿದರೂ ವಂಚಕರು ಒಪ್ಪಲಿಲ್ಲ. ಬದಲಾಗಿ ಹಣ ಪಾವತಿಸುವಂತೆ ಒತ್ತಡ ಹೇರಿದ್ದರಿಂದ ಅವರು ಸಾಲ ಮಾಡಿ ಹಣ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಹೂಡಿಕೆ ಮಾಡಿದ ಹಣ ಹಾಗೂ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಲಾಭದ ಮೊತ್ತದ ಶೇ. 10ರಷ್ಟು ಅಂದರೆ ₹5,10,724 ಕಮಿಷನ್ ಪಾವತಿಸಿದರೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿ ವಂಚಕರು ತಿಳಿಸಿದ್ದರು. ಇದನ್ನೂ ಪಾವತಿಸಿದ ಬಳಿಕ ವಂಚಕರು ಕರೆಗಳು, ವಾಟ್ಸ್‌ಆ್ಯಪ್ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ ಸಂಪರ್ಕ ಕಡಿತಗೊಳಿಸಿದ್ದಾರೆ.
ಹೀಗೆ ಹಂತ ಹಂತವಾಗಿ ಒಟ್ಟು ₹14,35,724 ಕಳೆದುಕೊಂಡಿರುವುದಾಗಿ ರಮೇಶ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಕ್ರಮಾಂಕ 137/2026ರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4)ರ ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕರಿಗೆ ಎಚ್ಚರಿಕೆ : ಸಾಮಾಜಿಕ ಜಾಲತಾಣಗಳಲ್ಲಿ ಬರುವ ಹೂಡಿಕೆ ಲಿಂಕ್‌ಗಳನ್ನು ಪರಿಶೀಲಿಸದೆ ತೆರೆಯಬೇಡಿ. ಖಚಿತ ಲಾಭದ ಆಮಿಷಕ್ಕೆ ಒಳಗಾಗಬೇಡಿ. ಹಣ ಹಿಂಪಡೆಯಲು ಹೆಚ್ಚುವರಿ ಶುಲ್ಕ ಅಥವಾ ಕಮಿಷನ್ ಪಾವತಿಸುವಂತೆ ಅಪರಿಚಿತರು ಒತ್ತಾಯಿಸಿದರೆ ಎಚ್ಚರಿಕೆ ವಹಿಸಿ.

