ಪರಿಸರ ರಕ್ಷಣಾ ಕಾರ್ಯಾಗಾರ

0
36

ಉಡುಪಿ : ಶರಾವತಿ ಪಂಪ್ಡ್​ ಸ್ಟೋರೇಜ್​ ಯೋಜನೆ ಪಶ್ಚಿಮಟ್ಟದ ಅಮೂಲ್ಯ ಮರಗಳು ಹಾಗೂ ವನ್ಯಜಿವಿಸಂಕುಲಕ್ಕೆ ಹಾನಿಮಾಡಲಿದ್ದು, ಈ ಪ್ರದೇಶಗಳಲ್ಲಿ ಕಲ್ಲಿದ್ದಲು ಗಣಿಗೆ ಉಪಯೋಗಿಸುವ ಭಾರಿ ಸ್ಫೋಟಕಗಳನ್ನು ಬಳಸುವುದರಿಂದ ಪಶ್ಚಿಮಘಟ್ಟದಾದ್ಯಂತ ಭೂಕುಸಿತದಂತಹ ಅನಾಹುತಗಳು ಸಂಭವಿಸಲಿವೆ ಎಂದು ಪರಿಸರ ತಜ್ಞೆ ನಿರ್ಮಲಾ ಗೌಡ ಹೇಳಿದರು.

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಪರಿಸರ ರಕ್ಷಣಾ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

ಉತ್ತರದ ಗುಜರಾತಿನ ತಾಪಿಯಿಂದ ದಕ್ಷಿಣದ ಕನ್ಯಾಕುಮಾರಿವರೆಗೆ ಹರಡಿರುವ ಪಶ್ಚಿಮ ಘಟ್ಟಗಳಲ್ಲಿ 59ಕ್ಕೂ ಹೆಚ್ಚಿನ ಅಪರೂಪದ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳು ವಿನಾಶದ ಅಂಚಿನಲ್ಲಿವೆ. ಇಡೀ ಜಗತ್ತಿನಲ್ಲಿ ಉತ್ತರಕನ್ನಡದ ಶರಾವತಿ ನದಿ ಪಾತ್ರದಲ್ಲಿ ಮಾತ್ರ ಸಿಂಗಳೀಕ ಇನ್ನೂ ಉಳಿದಿದೆ. 1972ರಲ್ಲಿ ಜಾರಿಗೆ ಬಂದಿರುವ ವನ್ಯಜಿವಿ ರಕ್ಷಣಾ ಕಾಯಿದೆ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ಮಾನವ ನಿರ್ಮಿತ ಕಟ್ಟಡ ರಚನಾ ಕಾರ್ಯನಡೆಸುವಂತಿಲ್ಲ. ಆದರೆ ಶರಾವತಿ ಪಂಪ್ಡ್​ ಸ್ಟೋರೇಜ್​ ಯೋಜನೆಯ ಕಾಂಕ್ರೀಟ್​ ಸ್ಥಾವರವು ಮೂರು ಫೂಟ್ಬಾಲ್​ ಸ್ಟೇಡಿಯಂನಷ್ಟು ಉದ್ದ, 18 ಮಳಿಗೆ ಕಟ್ಟಡದಷ್ಟು ಎತ್ತರವಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಇಷ್ಟು ಬೃಹತ್​ ಭೂಗತ ಕಟ್ಟಡಗಳಿಗೆ ಭೂಮಿ ಕೊರೆಯುವುದರಿಂದ ಮುಂದಿನ ದಿನಗಳಲ್ಲಿ ನಿರಂತರ ಭೂ ಕುಸಿತ ಉಂಟಾಗಿ ಜನಜೀವನವೇ ಅಸ್ತವ್ಯಸ್ತವಾಗಲಿದೆ. ಜಗತ್ತಿನ 22 ಪರಿಸರ ಸೂಕ್ಮಪ್ರದೇಶದಲ್ಲಿ ಒಂದೆನಿಸಿರುವ ಈ ತಾಣದಲ್ಲಿ ೂಜನೆ ಅಗತ್ಯವೇ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ

ಶರಾವತಿ ಪಂಪ್ಡ್​ ಸ್ಟೋರೇಜ್​ ಯೋಜನೆಯ ವಿರುದ್ಧ ಈಗಾಗಲೇ ಹೂಡಿರುವ ದಾವೆಯಲ್ಲಿ ಕರ್ನಾಟಕದ ಉಚ್ಚನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಯೋಜನೆಗೆ ಕೇಂದ್ರ ವನ್ಯಜಿವಿ ಮಂಡಳಿಯಿಂದ ಅನುಮೋದನೆ ನೀಡಿಲ್ಲ. ಯೋಜನೆ ಬಗೆಗಿನ ಆತಂಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಆದರೆ ಅಧಿಕಾರಿಗಳು ಈ ಯೋಜನೆಗೆ ಈಗಾಗಲೇ 6000 ಕೋಟಿ ರೂ. ವ್ಯಯಿಸಲಾಗಿದೆ ಎಂಬುದಾಗಿ ನ್ಯಾಯಾಲಯದಲ್ಲಿ ವಾದಿಸುವ ಮೂಲಕ ಅನಿವಾರ್ಯವಾಗಿ ಒಪ್ಪಿಕೊಳ್ಳುವ ಒತ್ತಡ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ್​ ಶಾನುಭಾಗ್​ ಪ್ರಾಸ್ತ್ತಾವಿಕವಾಗಿ ಮಾತನಾಡಿ ತಾವೇ ರೂಪಿಸಿರುವ ಪರಿಸರ ರಕ್ಷಣಾ ಕಾಯಿದೆಗಳನ್ನು ಅವೈಜ್ಞಾನಿಕ ಯೋಜನೆಗಳ ಮೂಲಕ ಸರ್ಕಾರವೇ ಉಲ್ಲಂಘಿಸುವುದು ವಿಪರ್ಯಾಸ ಎಂದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುರೇಖಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಕವಿತಾ ಅತಿಥಿಗಳನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here