ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ಗೆ ‘ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ’ ಪ್ರಶಸ್ತಿ; ಸ್ಪರ್ಧಿಸಿದ ಮೂರೂ ವಿಭಾಗಗಳಲ್ಲಿ ಅಗ್ರ ಮೂರರಲ್ಲಿ ಸ್ಥಾನ
ಮಣಿಪಾಲ : ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ) ಘಟಕವಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ), ಮಣಿಪಾಲದ ಬೋಧನಾ ಆಸ್ಪತ್ರೆಯಾದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (Federation of Indian Chambers of Commerce and Industry – ಫಿಕ್ಕಿ) ನೀಡುವ 18ನೇ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ 2026ರಲ್ಲಿ ‘ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ’ (Excellence in Community Engagement) ವಿಭಾಗದ ಪ್ರಶಸ್ತಿ ಲಭಿಸಿದೆ.
ಆಸ್ಪತ್ರೆಯ ಲಾಭರಹಿತ ಉಪಕ್ರಮ ಹಾಗೂ ಉಡುಪಿ-ಮಣಿಪಾಲ ಭಾಗದ ಪ್ರಥಮ ಎದೆಹಾಲು ಬ್ಯಾಂಕ್ ಆಗಿರುವ ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ಗೆ ಈ ಪ್ರಶಸ್ತಿ ಸಂದಿದೆ. ನವದೆಹಲಿಯ ಫಿಕ್ಕಿಯಲ್ಲಿ ಅಕ್ಟೋಬರ್ 27ರಂದು ನಡೆದ ಸಮಾರಂಭದಲ್ಲಿ ಲೋಕಸಭಾ ಸದಸ್ಯ ಡಾ. ಶಶಿ ತರೂರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಆಸ್ಪತ್ರೆಯ ಪರವಾಗಿ ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ (ಸಿಒಒ) ಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.
ಈ ಬಾರಿ ಫಿಕ್ಕಿಗೆ ಒಟ್ಟು 157 ನಾಮನಿರ್ದೇಶನಗಳು ಬಂದಿದ್ದು, ಕಸ್ತೂರ್ಬಾ ಆಸ್ಪತ್ರೆ ಸಲ್ಲಿಸಿದ್ದ ಮೂರೂ ಉಪಕ್ರಮಗಳು ತಮ್ಮ ತಮ್ಮ ವಿಭಾಗಗಳಲ್ಲಿ ಅಗ್ರ ಮೂರು ಅಂತಿಮ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ ಸಾಧನೆಯಾಗಿದೆ:
ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ – ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್, ಉಡುಪಿ-ಮಣಿಪಾಲ ಭಾಗದ ಪ್ರಥಮ ಎದೆಹಾಲು ಬ್ಯಾಂಕ್ (ವಿಜೇತ)
ರೋಗಿ ಸುರಕ್ಷತೆಯಲ್ಲಿ ಶ್ರೇಷ್ಠತೆ – ಆಸ್ಪತ್ರೆಯಾದ್ಯಂತ ಸಿಎಲ್ಎಬಿಎಸ್ಐ ತಡೆಗಟ್ಟುವಿಕೆ ಕಾರ್ಯಕ್ರಮ: ಐಸಿಯು, ಎಚ್ಡಿಯು ಹಾಗೂ ವಾರ್ಡ್ಗಳಲ್ಲಿ ಸಾಕ್ಷ್ಯಾಧಾರಿತ ಬಹು-ಬಂಡಲ್ ಕ್ರಮಗಳ ಮೂಲಕ ಸೆಂಟ್ರಲ್ ಲೈನ್ ಸಂಬಂಧಿತ ರಕ್ತಪ್ರವಾಹ ಸೋಂಕುಗಳ (CLABSI) ಇಳಿಕೆ (ಅಗ್ರ ಮೂರು ಅಂತಿಮ ಸ್ಪರ್ಧಿ)
ವರ್ಷದ ಶ್ರೇಷ್ಠ ತರಬೇತಿ ಮತ್ತು ಕೌಶಲಾಭಿವೃದ್ಧಿ ಉಪಕ್ರಮ – “Everyone is a Hero, Every Second Counts” (ಪ್ರತಿಯೊಬ್ಬರೂ ಹೀರೋ, ಪ್ರತಿ ಕ್ಷಣವೂ ಅಮೂಲ್ಯ): ಸಾರ್ವತ್ರಿಕ ಸಿಪಿಆರ್ ಹಾಗೂ ತುರ್ತು ಸ್ಪಂದನ ತರಬೇತಿಯ ಮೂಲಕ ಜೀವ ಉಳಿಸುವ ಕಾರ್ಯಪಡೆ ನಿರ್ಮಾಣ (ಅಗ್ರ ಮೂರು ಅಂತಿಮ ಸ್ಪರ್ಧಿ)
ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್, ಹಾಲುಣಿಸುವ ತಾಯಂದಿರು ಸ್ವಯಂಪ್ರೇರಿತವಾಗಿ ದಾನ ಮಾಡುವ ಎದೆಹಾಲನ್ನು ಸಂಗ್ರಹಿಸಿ, ಪರೀಕ್ಷಿಸಿ, ಪಾಶ್ಚರೀಕರಿಸಿ ಸುರಕ್ಷಿತವಾಗಿ ಶೇಖರಿಸುತ್ತದೆ. ತಾಯಂದಿರು ಹಾಲುಣಿಸಲು ಸಾಧ್ಯವಾಗದ ಅವಧಿಪೂರ್ವ ಜನಿಸಿದ, ಕಡಿಮೆ ತೂಕದ ಹಾಗೂ ಅನಾರೋಗ್ಯಪೀಡಿತ ನವಜಾತ ಶಿಶುಗಳಿಗೆ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಈ ಹಾಲನ್ನು ನೀಡಲಾಗುತ್ತದೆ. ಇದರಿಂದ ಅತ್ಯಂತ ದುರ್ಬಲ ಶಿಶುಗಳಿಗೂ ಎದೆಹಾಲಿನ ರಕ್ಷಣಾತ್ಮಕ ಪ್ರಯೋಜನಗಳು ದೊರೆಯುತ್ತವೆ.
ಪರಿಶೀಲನಾ ವರ್ಷದಲ್ಲಿ ಹಾಲಿನ ಬ್ಯಾಂಕ್, 493 ಸ್ವಯಂಪ್ರೇರಿತ ದಾನಿ ತಾಯಂದಿರಿಂದ 538 ಲೀಟರ್ಗಿಂತ ಹೆಚ್ಚು ಎದೆಹಾಲನ್ನು ಸಂಗ್ರಹಿಸಿ 660 ನವಜಾತ ಶಿಶುಗಳಿಗೆ ನೆರವಾಗಿದೆ. ಹಿಂದಿನ ವರ್ಷ ಇದು 430 ಶಿಶುಗಳು ಹಾಗೂ 300 ಲೀಟರ್ ಆಗಿತ್ತು. ದಾನಿ ಹಾಲಿಗೆ ಸಂಬಂಧಿಸಿದ ಯಾವುದೇ ಪ್ರತಿಕೂಲ ಘಟನೆ ವರದಿಯಾಗಿಲ್ಲ. ನಿಯಮಿತ ಆಪ್ತಸಮಾಲೋಚನೆ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಎದೆಹಾಲು ದಾನದ ಬಗ್ಗೆ ಈ ಭಾಗದ ಕುಟುಂಬಗಳಲ್ಲಿ ವಿಶ್ವಾಸ ಮೂಡಿಸುವಲ್ಲಿಯೂ ಇದು ಯಶಸ್ವಿಯಾಗಿದೆ.
ತಂಡವನ್ನು ಅಭಿನಂದಿಸಿದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, “ಫಿಕ್ಕಿಯ ಈ ಮನ್ನಣೆ ಕಸ್ತೂರ್ಬಾ ಆಸ್ಪತ್ರೆ ಹಾಗೂ ಇಡೀ ಮಾಹೆ ಪರಿವಾರಕ್ಕೆ ಹೆಮ್ಮೆಯ ಕ್ಷಣ. ಆರೋಗ್ಯ ಸೇವೆ ಆಸ್ಪತ್ರೆಯ ಗೋಡೆಗಳನ್ನು ಮೀರಿ ನಾವು ಸೇವೆ ಸಲ್ಲಿಸುವ ಸಮುದಾಯದ ಬದುಕನ್ನು ತಲುಪಬೇಕು ಎಂಬ ನಮ್ಮ ನಂಬಿಕೆಗೆ ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ಸಾಕ್ಷಿ. ದಾನ ಮಾಡಿದ ಪ್ರತಿ ಹನಿ ಹಾಲೂ ಜೀವದ ಕೊಡುಗೆ. ಹಾಲು ದಾನ ಮಾಡಿದ ತಾಯಂದಿರಿಗೆ ಹಾಗೂ ಈ ಉಪಕ್ರಮವನ್ನು ಯಶಸ್ವಿಗೊಳಿಸಿದ ವೈದ್ಯರು, ಶುಶ್ರೂಷಕರು ಮತ್ತು ಸಿಬ್ಬಂದಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ” ಎಂದು ಹೇಳಿದರು.
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, “ಕಸ್ತೂರ್ಬಾ ಆಸ್ಪತ್ರೆ ಸದಾ ವೈದ್ಯಕೀಯ ಶ್ರೇಷ್ಠತೆಯ ಜೊತೆಗೆ ಸಮಾಜದ ಬಗ್ಗೆ ಆಳವಾದ ಬದ್ಧತೆಯನ್ನು ಮೈಗೂಡಿಸಿಕೊಂಡಿದೆ. ಒಂದು ಬೋಧನಾ ಆಸ್ಪತ್ರೆ ಸಮುದಾಯದ ವಿಶ್ವಾಸ ಗಳಿಸಿ, ಜಾಗೃತಿ ಮೂಡಿಸಿ, ಅತ್ಯಂತ ದುರ್ಬಲ ನವಜಾತ ಶಿಶುಗಳ ಆರೋಗ್ಯ ಸುಧಾರಣೆಗೆ ಹೇಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಈ ಹಾಲಿನ ಬ್ಯಾಂಕ್ ಉತ್ತಮ ಉದಾಹರಣೆ. 157 ನಾಮನಿರ್ದೇಶನಗಳ ಪೈಕಿ, ರೋಗಿ ಸುರಕ್ಷತೆ ಹಾಗೂ ಸಿಪಿಆರ್ ತರಬೇತಿ ಸೇರಿದಂತೆ ಮೂರೂ ವಿಭಾಗಗಳಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದಿರುವುದು ಆಸ್ಪತ್ರೆಯಾದ್ಯಂತ ನಡೆಯುತ್ತಿರುವ ಕಾರ್ಯದ ಆಳವನ್ನು ತೋರಿಸುತ್ತದೆ. ಈ ಪ್ರಶಸ್ತಿ ನಮ್ಮ ಎಲ್ಲಾ ಬೋಧನಾ ಆಸ್ಪತ್ರೆಗಳಲ್ಲಿ ಇಂತಹ ಸಮುದಾಯ ಕೇಂದ್ರಿತ ಉಪಕ್ರಮಗಳನ್ನು ಮುಂದುವರಿಸಲು ನಮ್ಮ ತಂಡಗಳಿಗೆ ಸ್ಫೂರ್ತಿಯಾಗಲಿದೆ” ಎಂದರು.
ಈ ಮನ್ನಣೆಯೊಂದಿಗೆ, ಪುಟ್ಟ ನವಜಾತ ಶಿಶುವಿನಿಂದ ಹಿಡಿದು ವಿಶಾಲ ಸಮುದಾಯದವರೆಗೆ ತಾನು ತಲುಪುವ ಪ್ರತಿಯೊಂದು ಜೀವಕ್ಕೂ ಸಹಾನುಭೂತಿಯುಳ್ಳ, ಸಮುದಾಯ ಕೇಂದ್ರಿತ ಆರೈಕೆ ನೀಡುವ ತನ್ನ ಬದ್ಧತೆಯನ್ನು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಪುನರುಚ್ಚರಿಸುತ್ತದೆ.

