ಮೂಡುಬಿದಿರೆ : ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಮಕ್ಕಳಿಗೆ ಒಂದು ವಾರಗಳ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು 23-04-2026ರ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ದೀಪ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿ, ಯುವವಾಹಿನಿ ಸಂಸ್ಥೆಯ ಕಾರ್ಯವೈಖರಿಯನ್ನು ಕೊಂಡಾಡಿದರು. ಸಂಸ್ಥೆ ಬಲಿಷ್ಠವಾಗಿದ್ದು, ಇದು ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಇಂತಹ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ಅವರ ಭವಿಷ್ಯ ನಿರ್ಮಾಣಕ್ಕೆ ಮಹತ್ತರವಾದ ನೆರವು ನೀಡುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ. ಕೆ. ಅವರು ಉಪಸ್ಥಿತರಿದ್ದು, ಯುವವಾಹಿನಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ವಿವಿಧ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ವಿವರಿಸಿ, ಇಂತಹ ಶಿಬಿರಗಳ ಮಹತ್ವವನ್ನು ಎತ್ತಿ ಹಿಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿಯೂ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರದ ನಿರ್ದೇಶಕರಾಗಿಯೂ ಇರುವ ಶುಭಲಕ್ಷ್ಮಿ ಅವರು ಬೇಸಿಗೆ ಶಿಬಿರದ ಕುರಿತು ವಿವರವಾದ ಮಾಹಿತಿಗಳನ್ನು ನೀಡಿದರು. ಶಿಬಿರದಲ್ಲಿ ನಡೆಯಲಿರುವ ತರಬೇತಿಗಳು, ವಿದ್ಯಾರ್ಥಿಗಳಿಗೆ ದೊರೆಯುವ ಅನುಭವಗಳು ಹಾಗೂ ಅವರ ಕೌಶಲ್ಯವನ್ನು ವೃದ್ಧಿಸುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದರು. ಯುವವಾಹಿನಿ ಸಂಸ್ಥೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶಿಬಿರವನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಈ ಮೂಲಕ ಆ ವಿದ್ಯಾರ್ಥಿಗಳಿಗೆ ಸಹ ಶಿಬಿರದ ಪ್ರಯೋಜನ ಪಡೆಯುವ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ ಎಂದರು. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಂಸ್ಥೆಗೆ ಅಪಾರ ಸಂತೃಪ್ತಿಯನ್ನು ನೀಡುತ್ತದೆ ಎಂದು ಹೇಳಿ, ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿ ಅಶ್ವಿನ್ ಪೂಜಾರಿ ಹಾಗೂ ಕೋಶಾಧಿಕಾರಿ ಜಯಶೀಲಾ ಎಸ್. ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶುಭಲಕ್ಷ್ಮಿ ನಿರೂಪಿಸಿ, ವಂದಿಸಿದರು.

