ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದ ಗಣೇಶೋತ್ಸವದ ಪ್ರಯುಕ್ತ ಸೆ.18ರಂದು ಗಣೇಶ ಮೂರ್ತಿಯ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಮೂಡಬಿದಿರೆ ಪೇಟೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮೂಡಬಿದಿರೆ ಪೇಟೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಮಧ್ಯಾಹ್ನ 2 ಗಂಟೆಯ ಬಳಿಕ ವಿವಿಧ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ನಿಗದಿಪಡಿಸಲಾಗಿದೆ ಎಂದು ಮೂಡಬಿದಿರೆ ಪೊಲೀಸ್ ಠಾಣೆ ತಿಳಿಸಿದೆ.
ಮಂಗಳೂರಿನಿಂದ ಕಾರ್ಕಳ ಕಡೆಗೆ ತೆರಳುವ ವಾಹನಗಳು ಇನ್ನರ್ ವೀಲ್, ರಿಂಗ್ ರೋಡ್ ಹಾಗೂ ಅಲಂಗಾರ ಮಾರ್ಗವಾಗಿ ಸಂಚರಿಸಬೇಕು. ಮಂಗಳೂರಿನಿಂದ ಮೂಡಬಿದಿರೆ, ಬೆಳ್ತಂಗಡಿ ಹಾಗೂ ಬಂಟ್ವಾಳ ಕಡೆಗೆ ತೆರಳುವ ವಾಹನಗಳು ವಿದ್ಯಾಗಿರಿ–ಮಾಸ್ತಿಕಟ್ಟೆ ಕ್ರಾಸ್–ಪೇಪರ್ ಮಿಲ್ ಮಾರ್ಗವಾಗಿ ಬಂಟ್ವಾಳ ಹಾಗೂ ಕೀರ್ತಿನಗರ ಮೂಲಕ ಬೆಳ್ತಂಗಡಿ ಕಡೆಗೆ ತೆರಳಬೇಕು.
ಮೂಡಬಿದಿರೆಯಿಂದ ಶಿರ್ತಾಡಿ ಕಡೆಗೆ ತೆರಳುವ ವಾಹನಗಳು ಇನ್ನರ್ ವೀಲ್, ರಿಂಗ್ ರೋಡ್, ಅಲಂಗಾರ ಹಾಗೂ ಜೈನ್ ಪೇಟೆ ಮಾರ್ಗ ಬಳಸಬೇಕು. ಬೆಳ್ತಂಗಡಿ ಮತ್ತು ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಪೇಪರ್ ಮಿಲ್, ಮಾಸ್ತಿಕಟ್ಟೆ ಹಾಗೂ ವಿದ್ಯಾಗಿರಿ ಮಾರ್ಗವಾಗಿ ತೆರಳಬೇಕು.
ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಲಘು ವಾಹನಗಳು ಸತ್ಯನಾರಾಯಣ ದೇವಸ್ಥಾನ, ಅಮರಶ್ರೀ ಟಾಕೀಸ್, ಮೂಡಬಿದಿರೆ ಸರಕಾರಿ ಆಸ್ಪತ್ರೆ ಬಳಿ ಎಡಕ್ಕೆ ತಿರುಗಿ ಮಾಸ್ತಿಕಟ್ಟೆ ಹಾಗೂ ವಿದ್ಯಾಗಿರಿ ಮಾರ್ಗವಾಗಿ ಸಂಚರಿಸಬೇಕು. ಬೆಳ್ತಂಗಡಿ ಮತ್ತು ಬಂಟ್ವಾಳ ಕಡೆಯಿಂದ ಮಂಗಳೂರು ಹಾಗೂ ಕಾರ್ಕಳ ಕಡೆಗೆ ತೆರಳುವ ವಾಹನಗಳು ಮಹಾವೀರ ಕಾಲೇಜು, ಕೊಡಂಗಲ್ಲು ಕ್ರಾಸ್, ಕೋಟೆಬಾಗಿಲು, ಜೈನ್ ಪೇಟೆ ಹಾಗೂ ಅಲಂಗಾರ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ
ಗಣೇಶೋತ್ಸವ ಶೋಭಾಯಾತ್ರೆಗೆ ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪೊಲೀಸ್ ಠಾಣೆ ಬಳಿಯ ಶಾಲಾ ಮೈದಾನ, ಕೆಇಬಿ ಬಳಿಯ ಪ್ರದೇಶ, ಕೈಕಂಬ ಜಂಕ್ಷನ್ ಬಳಿಯ ಖಾಲಿ ಜಾಗ, ಸ್ವರಾಜ್ಯ ಮೈದಾನ, ಕನ್ನಡ ಭವನ, ಮಾಸ್ತಿಕಟ್ಟೆ ಹಾಗೂ ಕೋರ್ಟ್ ರೋಡ್ ಬಳಿ ನಿಗದಿಪಡಿಸಿರುವ ಸ್ಥಳಗಳಲ್ಲಿ ಪಾರ್ಕ್ ಮಾಡಬೇಕು.
ಮೂಡಬಿದಿರೆ ಬಸ್ ನಿಲ್ದಾಣ, ಸಮಾಜ ಮಂದಿರ, ಮಾರ್ಕೆಟ್ ಕಟ್ಟಡ, ಹನುಮಾನ ದೇವಸ್ಥಾನ, ಮಸೀದಿ ರಸ್ತೆ, ಆಳ್ವಾಸ್ ಆಸ್ಪತ್ರೆ ರಸ್ತೆ, ಪುರಸಭೆ ರಸ್ತೆ, ಪಟ್ಟಾಡಿ ರಸ್ತೆ, ಅಮರಶ್ರೀ ಟಾಕೀಸ್ ರಸ್ತೆ, ಜಿವಿ ಪೈ ಆಸ್ಪತ್ರೆ, ನಿಶ್ಚಿತಾ ಸರ್ಕಲ್ ಹಾಗೂ ಐ.ಬಿ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ಸಂಪೂರ್ಣ ನಿಷೇಧಿಸಲಾಗಿದೆ.
ಶೋಭಾಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಸಂಚಾರ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಸಹಕರಿಸುವಂತೆ ಮೂಡಬಿದಿರೆ ಪೊಲೀಸ್ ಠಾಣೆ ಮನವಿ ಮಾಡಿದೆ.

