ಸಂತೆಕಟ್ಟೆ ಮೆಸ್ಕಾಂ ಟ್ರಾನ್ಸ್‌ಫಾರ್ಮರ್ ಕೆಳಗೆ ಕಸದ ರಾಶಿ : ಅಗ್ನಿ ಅವಘಡ ಭೀತಿ, ತಕ್ಷಣ ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹ

0
53

ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಸಂತೆಕಟ್ಟೆ ಕೆನರಾ ಬ್ಯಾಂಕ್ ಎದುರುಗಡೆಯಲ್ಲಿರುವ ಮೆಸ್ಕಾಂ ಟ್ರಾನ್ಸ್‌ಫಾರ್ಮರ್ ಕೆಳಭಾಗದಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಕೋಳಿ ಹಾಗೂ ಮೀನು ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸವನ್ನು ಅನಧಿಕೃತವಾಗಿ ಬಿಸಾಡಲಾಗುತ್ತಿದ್ದು, ದುರ್ವಾಸನೆ ಹರಡುತ್ತಿದೆ. ಈಗಾಗಲೇ ಕಸದ ರಾಶಿಗೆ ಬೆಂಕಿ ತಗುಲಿ ಟ್ರಾನ್ಸ್‌ಫಾರ್ಮರ್‌ಗೆ ಅಪಾಯ ಉಂಟಾದ ಘಟನೆ ನಡೆದಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.

ಸಂತೆಕಟ್ಟೆ-ಕೆಮ್ಮಣ್ಣು ಕ್ರಾಸ್ ಭಾಗವು ಜನವಸತಿ ಪ್ರದೇಶವಾಗಿದ್ದು, ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ ಮೆಸ್ಕಾಂ ಹಾಗೂ ನಗರಸಭೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೆನರಾ ಬ್ಯಾಂಕ್ ಬಳಿ ಸಿಸಿ ಕ್ಯಾಮೆರಾ ವ್ಯವಸ್ಥೆ ಇದ್ದರೂ ಕಸ ಎಸೆಯುವವರನ್ನು ಪತ್ತೆಹಚ್ಚುವ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಟ್ರಾನ್ಸ್‌ಫಾರ್ಮರ್ ಕೆಳಭಾಗದಲ್ಲಿ ನಿರಂತರವಾಗಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಲ್ಲದೆ ಶಾಶ್ವತ ಸಿಸಿ ಕ್ಯಾಮೆರಾ ಅಳವಡಿಸಿ, ಈ ಪ್ರದೇಶದಲ್ಲಿ ಮತ್ತೆ ಕಸ ಹಾಕದಂತೆ ತಡೆಗಟ್ಟುವ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ನಡುಮನೆ, ಅರುಣ್ ಪೂಜಾರಿ ಮಾಯಾಡಿ ಹಾಗೂ ಸಂತೋಷ್ ಸಂತೆಕಟ್ಟೆ ಅವರು ನಗರಸಭೆ ಮತ್ತು ಮೆಸ್ಕಾಂ ಇಲಾಖೆ ತಕ್ಷಣ ಕಸದ ರಾಶಿ ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here