ಮೂಡುಬಿದಿರೆಯಲ್ಲಿ ಸರಕಾರಿ ಪದವಿ ಪೂರ್ವ, ತಾಂತ್ರಿಕ, ಕಾಲೇಜುಗಳು ತೆರೆಯಲ್ಪಡಲಿ

0
117

ವರದಿ ರಾಯಿ ರಾಜ ಕುಮಾರ

ಜಿಲ್ಲಾ ಮಟ್ಟದ ಬೇಡಿಕೆಗಳೊಂದಿಗೆ ಮೂಡುಬಿದಿರೆ ತಾಲೂಕು ಮಟ್ಟದ ಬೇಡಿಕೆಗಳನ್ನು ಕೂಡ ಈಡೇರಿಸುವುದಕ್ಕೆ ಅಗತ್ಯ ಇರುವ ಆರ್ಥಿಕ ಯೋಜನೆಗಳನ್ನು ಸಿದ್ಧಪಡಿಸಬೇಕೆಂದು ಮೂಡುಬಿದರೆ ತಾಲೂಕು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ವಿಭಾಗದ ಸಮಿತಿಯು ಆಗ್ರಹಿಸಿದೆ. ಮೂಡುಬಿದಿರೆ ತಾಲೂಕಿನ ಎಲ್ಲಾ ಪ್ರಮುಖ ನಗರಗಳನ್ನು ಸಂಪರ್ಕಿಸುವಂತೆ ಸರಕಾರಿ ಬಸ್ಸುಗಳನ್ನು ಓಡಿಸಬೇಕು. ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಪದವಿ ಪೂರ್ವ ಕಾಲೇಜು, ತಾಂತ್ರಿಕ ಕಾಲೇಜು, ಸರಕಾರಿ ಕಾಲೇಜುಗಳನ್ನು ಆದಷ್ಟು ಶೀಘ್ರ ತೆರೆಯಬೇಕು. ಸರಕಾರಿ ಶಾಲೆ-ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅತ್ಯುತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಂತಾಗಬೇಕು ಎಂದು ಸಮಿತಿ ಆಗ್ರಹಿಸಿದೆ.
ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ವಿಭಾಗ ದ ಮೂಡುಬಿದ್ರೆ ತಾಲೂಕು ಸಮಿತಿಯ ಆಶ್ರಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ತಾಲೂಕು ಸಮಿತಿ ಸದಸ್ಯರುಗಳಾದ ರಾಧಾ, ಗಿರಿಜಾ, ಲಕ್ಷ್ಮಿ ಅವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಆರೋಗ್ಯ, ಶಿಕ್ಷಣ, ಉದ್ಯೋಗ, ಕೈಗಾರಿಕೆ ಇತ್ಯಾದಿ ಎಲ್ಲ ವಲಯಗಳಲ್ಲಿಯೂ ಕೂಡ ಸ್ಥಳೀಯರಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಬೇಕು. ಕಾರ್ಮಿಕರಿಗೆ, ರೈತರಿಗೆ, ಯುವಜನ ವಿದ್ಯಾರ್ಥಿಗಳಿಗೆ, ಮಹಿಳಾ, ದಲಿತ, ಆದಿವಾಸಿ, ಹಾಗೂ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸರಕಾರ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸಬೇಕಾಗಿದೆ. ಸಾಧ್ಯವಿರುವಷ್ಟು ಮನೆ ನಿವೇಶನಗಳನ್ನು ಬಡವರ್ಗದವರಿಗೆ ನೀಡುವ ಕೆಲಸ ಆಗಬೇಕಾಗಿದೆ. ಆದ್ಯತೆಯ ನೆಲೆಯಲ್ಲಿ ದಲಿತರಿಗೆ ಮನೆ ನಿವೇಶನವನ್ನು ನೀಡಬೇಕು ಎಂಬ ಬೇಡಿಕೆಗಳನ್ನು ಒತ್ತಾಯಿಸಿ ಡಿಸೆಂಬರ್ 8ರಂದು ಮಂಗಳೂರಿನ ಅಂಬೇಡ್ಕರ್ ವೃತ್ತದ ಬಳಿಯಿಂದ ತಹಸೀಲ್ದಾರರ ಕಚೇರಿಯ ತನಕ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಯಲಿದೆ ಎಂದು ಮಾರ್ಕ್ಸವಾದಿ ಭಾರತ ಕಮ್ಯುನಿಸ್ಟ್ ಪಕ್ಷದ ವಕ್ತಾರರು ತಿಳಿಸಿರುತ್ತಾರೆ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆಯುವ ಈ ಪ್ರತಿಭಟನೆಗೆ ಸುಮಾರು 300ಕ್ಕೂ ಹೆಚ್ಚು ಮೂಡುಬಿದಿರೆಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here