ಎಲ್ಲ ಧರ್ಮಗಳ ಸಾರ – ಮಾನವೀಯತೆಯೇ ಶ್ರೇಷ್ಠ ಧರ್ಮ: ಪ್ರಶಾಂತ್ ಅನಂತಾಡಿ
ಕಲ್ಲಡ್ಕ : “ಎಲ್ಲಾ ಮತಧರ್ಮಗಳಲ್ಲಿರುವ ಉತ್ತಮಾಂಶಗಳ ಸಾರವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಆಧ್ಯಾತ್ಮಿಕತೆ. ಶ್ರೀ ನಾರಾಯಣಗುರುಗಳ ಸಂದೇಶಗಳಲ್ಲಿ ಈ ವಿಶಾಲ ಮಾನವೀಯ ದೃಷ್ಟಿಕೋನ ಸ್ಪಷ್ಟವಾಗಿ ಕಾಣುತ್ತದೆ” ಎಂದು ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಪ್ರಶಾಂತ್ ಅನಂತಾಡಿ ಹೇಳಿದರು.
ಅವರು ಜುಲೈ 31ರಂದು ಮುರಬೈಲು–ಗೊಳ್ತಮಜಲು, ಕಲ್ಲಡ್ಕದ ಮೋಹನ್ ಪೂಜಾರಿ ಅವರ ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ – 73ನೇ ಮಾಲಿಕೆ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.

ಗುರುಗಳ ಚಿಂತನೆಗಳನ್ನು ಅರಿತಾಗ ಭಗವಾನ್ ಬುದ್ಧ, ಆದಿ ಶಂಕರಾಚಾರ್ಯರು, ಬಸವಣ್ಣ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಮಾನವತಾವಾದಿ ತತ್ವಗಳನ್ನು ಇನ್ನಷ್ಟು ಆಳವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಮಾಜಿಕ ಸಮಾನತೆ, ಧಾರ್ಮಿಕ ಸಾಮರಸ್ಯ, ಶಿಕ್ಷಣದ ಮಹತ್ವ ಹಾಗೂ ಆರ್ಥಿಕ ಸ್ವಾವಲಂಬನೆಯ ಕುರಿತು ಶ್ರೀ ನಾರಾಯಣಗುರುಗಳು ಪ್ರತಿಪಾದಿಸಿದ ವಿಚಾರಗಳು ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿವೆ. ಇಂದಿನ ಕಾಲದಲ್ಲಿಯೂ ಅವರ ಸಂದೇಶಗಳು ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ದಾರಿದೀಪವಾಗಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಮಾಣಿ ಘಟಕದ ದ್ವಿತೀಯ ಉಪಾಧ್ಯಕ್ಷ ಸತೀಶ್ ಕೊಪ್ಪರಿಗೆ, ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ನವೀನ್ ಪೂಜಾರಿ ಕಾರಾಜೆ, ಯೋಗೀಶ್ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿ ಜಗನ್ನಾಥ್ ಕಲ್ಲಡ್ಕ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರಾ, ನಾಗೇಶ್ ಪೊನ್ನೋಡಿ, ಶಿವಾನಂದ ಎಂ., ಸದಸ್ಯರಾದ ಯಶೋಧರ್ ಕಡಂಬಲಿಕೆ, ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ, ಸತೀಶ್ ಪೂಜಾರಿ ಬಾಯಿಲ ಉಪಸ್ಥಿತರಿದ್ದರು.
ಸಾತ್ವಿಕ್ ದೇರಾಜೆ, ಕಾರ್ತಿಕ್ ದೇರಾಜೆ ಹಾಗೂ ವಿನಯ್ ಆಚಾರ್ಯ ಸಂಗೀತ ಸೇವೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್ ರಾಜ್ ಪೂಂಜರಕೋಡಿ ಸ್ವಾಗತಿಸಿದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ಧನ್ಯವಾದ ಸಲ್ಲಿಸಿದರು.

