ದ್ವೇಷಾಸೂಯೆ ಅಹಂಕಾರಗಳೇ ಸಂಘರ್ಷಕ್ಕೆ ಮೂಲ

0
11

ಕಾರ್ಕಳ : ಕೌರವರು ಧೃತರಾಷ್ಟçನ ಅರಮನೆಯಲ್ಲಿ ಬೆಳೆಯುತ್ತಿರುವಾಗಲೇ ಋಷಿ ಮುನಿಗಳೆಲ್ಲರ ಆಶಯದಂತೆ ಅವರ ಸಂಪೂರ್ಣ ಆಶೀರ್ವಾದ ಪಡೆದ ಪಾಂಡವರನ್ನು ತನ್ನ ಮಕ್ಕಳ ಜೊತೆ ಧೃತರಾಷ್ಟ ನು ಸೇರಿಸಿಕೊಂಡ. ಆದರೆ ದುರ್ಯೋಧನನಿಗೆ ಇವರೆಲ್ಲರ ಮೇಲೆ ಬಾಲ್ಯದಿಂದಲೇ ಮೈಮನಸ್ಸು ಹುಟ್ಟಿ ಅದು ನಾನಾ ಕಾರಣಗಳಿಂದ ಬೆಳೆಯುತ್ತಲೇ ಹೋಗುತ್ತದೆ. ಭೀಮನನ್ನು ವಿಷ ಪ್ರಾಶನದಿಂದ ಕೊಲ್ಲಲ್ಲು ಪ್ರಯತ್ನಿಸಿದರೂ ಆತ ಮತ್ತೆ ನೂರಾನೆ ಬಲದೊಂದಿಗೆ ಮರಳಿ ಬರುತ್ತಾನೆ. ಮಹಾಭಾರತದ ಭಾವದೀಪ ಆರದಂತೆ ನೋಡಿಕೊಂಡ ಭೀಷ್ಮ ಮಹಾತ್ಮರಿಗೂ ಇವರ ವೈಷಮ್ಯವನ್ನು ಕೊನೆಗಾಣಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸಮಾಲೆಯ ಪಂಚಮ ಸೋಪಾನದಲ್ಲಿ ಅವರು ‘ಕುಲವೊಂದು ಕವಲೆರಡು’ ಎಂಬ ಕುರಿತಾಗಿ ಮೇ 23ರಂದು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಋಷಿ ಪರಂಪರೆಯ ದ್ರೋಣ ಮತ್ತು ರಾಜ ಪರಂಪರೆಯ ದ್ರುಪದ ಗುರುಕುಲದಲ್ಲಿ ಸ್ನೇಹಿತರಾಗಿದ್ದರೂ ಮುಂದೆ ದ್ರುಪದ ರಾಜನಾದಾಗ ದ್ರೋಣರು ಅರಮನೆಗೆ ಹೋದಾಗ ದ್ರುಪದನು ಅಹಂಕಾರದಿಂದ ಅವರನ್ನು ಅವಮಾನಿಸುತ್ತಾನೆ. ಆತ್ಮಭಿಮಾನಕ್ಕಾದ ಅವಮಾನವು ಸೇಡಾಗಿ ಪರಿವರ್ತನೆಗೊಂಡು ಮುಂದೆ ಸಂಘರ್ಷಕ್ಕೆ ಕಾರಣವಾಗಿ ದ್ರುಪದನ ಗರ್ವಭಂಗವಾಗುತ್ತದೆ. ಹೀಗೆ ದ್ವೇಷ, ಅಸೂಯೆ, ಅಹಂಕಾರಗಳೇ ಯುದ್ಧಕ್ಕೆ ಪ್ರೇರಣೆಯಾದವು ಎಂದರು.

ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್‌ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಅ.ಭಾ.ಸಾ.ಪ.ದ ದ.ಕ ಜಿಲ್ಲಾ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ, ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕರಾದ ಪಲ್ಲವಿ ಕೀರ್ತನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಶ್ರೀ ಆದಿರಾಜ ಅಜ್ರಿ ಪ್ರಾರ್ಥಿಸಿ ಡಾ. ಸುಮತಿ ಪಿ. ಕರ‍್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಸುಲೋಚನಾ ಬಿ.ವಿ ವಂದಿಸಿದರು.

LEAVE A REPLY

Please enter your comment!
Please enter your name here