ಮುಗ್ರೋಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ: ಅಪಾರ ನಷ್ಟ – ಐವನ್ ಡಿಸೋಜಾ ಭೇಟಿ

0
39

ಮಂಗಳೂರು: ಮುಗ್ರೋಡಿ ಸಂಜಯನಗರ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಲೋಚನಾ ಅವರ ಮನೆಯಲ್ಲಿ ಸಂಭವಿಸಿದ ಈ ಅವಘಡದಲ್ಲಿ ಮನೆಯಲ್ಲಿದ್ದ ಸೊತ್ತುಗಳು ಸಂಪೂರ್ಣವಾಗಿ ನಾಶವಾಗಿದ್ದು, ಕುಟುಂಬಕ್ಕೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಘಟನೆ ಕುರಿತು ಮೆಸ್ಕಾಂ ಅಧಿಕಾರಿಗಳಾದ ಇಇ ಶಿವಕುಮಾರ್, ಎಇ ಸುಬ್ರಹ್ಮಣ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿಯೊಂದಿಗೆ ಶಾಸಕರು ಸ್ಥಳ ಪರಿಶೀಲನೆ ನಡೆಸಿ ಚರ್ಚಿಸಿದರು.

ನಷ್ಟದ ಕುರಿತು ಸಂಬಂಧಿತ ಇಲಾಖೆಗಳ ವರದಿ ಪಡೆದು ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಐವನ್ ಡಿಸೋಜಾ ಸೂಚಿಸಿದರು. ಅಲ್ಲದೆ, ಪ್ರದೇಶದಲ್ಲಿ ಹಲವೆಡೆ ವಿದ್ಯುತ್ ತಂತಿಗಳು ಅಪಾಯಕಾರಿಯಾಗಿ ನೇತಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಸರಿಪಡಿಸದಿದ್ದರೆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಈ ಪ್ರಕರಣದಲ್ಲಿ ಶಾರ್ಟ್ ಸರ್ಕ್ಯೂಟ್‌ನ ಕಾರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ತಿಳಿಸಿದ ಅವರು, ಬೆಂಕಿಗೆ ಆಹುತಿಯಾದ ಮನೆಯವರ ಬಟ್ಟೆ, ದಾಖಲೆಗಳು ಹಾಗೂ ಶಾಲಾ ಶುಲ್ಕಕ್ಕಾಗಿ ಸಂಗ್ರಹಿಸಿದ್ದ ಹಣಕ್ಕೂ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ ಮಹಾಕಾಳಿಪಡ್ಪು ಜೆಪ್ಪು ಪ್ರದೇಶದಲ್ಲಿ ಇತ್ತೀಚೆಗೆ ಮೃತರಾದ ವರುಣ್ ಕುಟುಂಬಕ್ಕೆ ಇನ್ನೂ ಪರಿಹಾರ ನೀಡದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಿತೇಶ್ ಅಂಚನ್, ಸ್ಟ್ಯಾನಿ ಪಿಂಟೋ, ಯಶ್ವಂತ್ ಪ್ರಭು ಹಾಗೂ ಸ್ಥಳೀಯರಾದ ಪದ್ಮಾವತಿ ಅಂಚನ್, ಶೋಭಾ, ಶೇಖರ್, ಕಾಶಿನಾಥ್, ಪುಷ್ಪ, ಸ್ಯಾಮ್ಯುಯೆಲ್, ಶಂಕರ್ ಮತ್ತು ಗುರುಪ್ರಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here