ಅಕ್ರಮ ಗೋಮಾಂಸ ಸಾಗಾಟ ಪತ್ತೆ : 70ಕ್ಕೂ ಹೆಚ್ಚು ಗೋಕರುಗಳ ಹತ್ಯೆ ಶಂಕೆ !

0
80

ಧಾರವಾಡ : ಧಾರವಾಡದ ನರೇಂದ್ರ ಬೈಪಾಸ್ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಂದಾಜು 4ರಿಂದ 5 ಟನ್‌ಗಳಷ್ಟು ಗೋಮಾಂಸವನ್ನು ಪೊಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಹಾಗೂ ಭಜರಂಗ ದಳದ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಟ್ರಕ್‌ನ್ನು ಬೆನ್ನಟ್ಟಿ ತಡೆದು, ಬಳಿಕ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಪರಿಣಾಮ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಗಾವಿ ಜಿಲ್ಲೆಯ ಹತ್ತರಗಿ ಪ್ರದೇಶದಲ್ಲಿ ಸುಮಾರು 70 ಗೋಕರುಗಳನ್ನು ಹತ್ಯೆ ಮಾಡಿ, ಅವುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕ ಅಲೀಂ ಜಮಾದಾರ್ ಹಾಗೂ ಸಹಚಾಲಕ ಸಾದಿಕ್ ಮೊಹಮ್ಮದ್ ಅಲಿ ಅಲವಡ್ಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದಲ್ಲದೆ, ಕಸಾಯಿಖಾನೆ ಮಾಲೀಕ ಮಲ್ಲಿಕ್, ಗೋಮಾಂಸ ಲೋಡಿಂಗ್ ಏಜೆಂಟ್ ಮೈನುದ್ದೀನ್ ಸೇರಿದಂತೆ ಇನ್ನೂ ಹಲವರು ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಜಪ್ತಿ ಮಾಡಿದ ಗೋಮಾಂಸವನ್ನು ಬೆಂಗಳೂರು ಶಿವಾಜಿನಗರದ ಬರ್ಕತ್ ಎಂಬಾತನಿಗೆ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ವಾಹನದ ಚಲನವಲನದ ಬಗ್ಗೆ ಮಾಹಿತಿ ಪಡೆದ ವಿಹೆಚ್‌ಪಿ ಹಾಗೂ ಭಜರಂಗ ದಳದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ-4ರ ನರೇಂದ್ರ ಬೈಪಾಸ್ ಬಳಿ ಟ್ರಕ್‌ನ್ನು ತಡೆದು, ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು. ಬಳಿಕ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.

ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಅನ್ವಯಿಸುವ ವಿವಿಧ ಕಾನೂನುಗಳಡಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ, ಅಕ್ರಮ ಗೋಮಾಂಸ ಸಾಗಾಟದ ಹಿಂದಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಪೊಲೀಸ್ ಇಲಾಖೆಯನ್ನು ಆಗ್ರಹಿಸಿವೆ.

ಮೇಲಿನ ಆರೋಪಗಳು ಪೊಲೀಸ್ ಪ್ರಕರಣ ಮತ್ತು ದೂರುಗಳಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ಆಧರಿಸಿವೆ. ತನಿಖೆ ಪ್ರಗತಿಯಲ್ಲಿದ್ದು, ಆರೋಪಗಳ ಬಗ್ಗೆ ಅಂತಿಮ ನಿರ್ಧಾರ ನ್ಯಾಯಾಲಯದ ವಿಚಾರಣೆಯ ನಂತರವೇ ಹೊರಬೀಳಲಿದೆ.