
ಪುತ್ತೂರು : ಅಕ್ರಮವಾಗಿ ಹಸುವನ್ನು ಮಾಂಸ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಯಾಪು ಗ್ರಾಮದ ಮರಕ್ಕ ಸಮೀಪ ಈ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಉಪನಿರೀಕ್ಷಕಿ (ತನಿಖೆ) ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದ ತಂಡ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಪಿಕಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ಪಿಕಪ್ ವಾಹನದಲ್ಲಿ ಹಸುವಿನ ಬಾಯಿ ಹಾಗೂ ಕಾಲುಗಳನ್ನು ಹಗ್ಗದಿಂದ ಬಿಗಿದು, ಆಹಾರ ಮತ್ತು ನೀರು ನೀಡದೆ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿರುವುದು ಪತ್ತೆಯಾಗಿದೆ. ಅಲ್ಲದೆ, ಜಾನುವಾರು ಸಾಗಾಟಕ್ಕೆ ಅಗತ್ಯವಾದ ಯಾವುದೇ ಪರವಾನಿಗೆ ಅಥವಾ ಪಶುವೈದ್ಯಾಧಿಕಾರಿಯ ಪ್ರಮಾಣಪತ್ರವನ್ನು ವಾಹನದಲ್ಲಿದ್ದವರು ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮೊಯ್ದುಕುಂಞ, ನಾರಾಯಣ ಹಾಗೂ ಮೇಗಿನಪಂಜದ ಬಾಲಕೃಷ್ಣ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 5, 7 ಮತ್ತು 12 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ-1960ರ ಕಲಂ 11(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸರು ಸುಮಾರು ₹4 ಲಕ್ಷ ಮೌಲ್ಯದ ಪಿಕಪ್ ವಾಹನ ಹಾಗೂ ಅಂದಾಜು ₹10 ಸಾವಿರ ಮೌಲ್ಯದ ಹಸುವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ಮುಂದುವರಿದಿದೆ.
