ರಾಮಭಕ್ತರ ಕಾಣಿಕೆ ಹಣದಲ್ಲಿ ಅಕ್ರಮ ಮಾಡಿದವರನ್ನು ಬಿಡುವುದಿಲ್ಲ : ಯೋಗಿ ಆದಿತ್ಯನಾಥ್

0
20

ಲಕ್ನೋ : “ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ. ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ. ಆ ಹಣದಲ್ಲಿ ಅಕ್ರಮ ಎಸಗುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

ಡಿಯೋರಿಯಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

“ಸನಾತನ ಧರ್ಮದ ಭಾವನೆಗಳನ್ನು ನೋಯಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.

ಈ ವೇಳೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, “ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸುತ್ತಿರುವವರು ರಾಮಮಂದಿರವನ್ನು ಆರಂಭದಿಂದಲೇ ವಿರೋಧಿಸಿದವರೇ. ಅವರು ಭಗವಾನ್ ರಾಮನೇ ಇರಲಿಲ್ಲ ಎಂದು ವಾದಿಸಿದ್ದರು ಹಾಗೂ ಸುಪ್ರೀಂ ಕೋರ್ಟ್‌ನಲ್ಲೂ ರಾಮಮಂದಿರದ ವಿರುದ್ಧ ವಾದ ಮಂಡಿಸಿದ್ದರು” ಎಂದು ಆರೋಪಿಸಿದರು.

“ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಹಾಗೂ ರಾಮನವಮಿ ಸಂದರ್ಭದಲ್ಲಿ ಗಲಭೆಗಳಿಗೆ ಕಾರಣರಾದವರೇ ಈಗ ಈ ವಿಷಯವನ್ನು ರಾಜಕೀಯ ಉದ್ದೇಶದಿಂದ ಎತ್ತುತ್ತಿದ್ದಾರೆ. ಯಾರ ಬಳಿಯೇ ಪುರಾವೆಗಳಿದ್ದರೂ ಅವನ್ನು ಎಸ್‌ಐಟಿಗೆ ಸಲ್ಲಿಸಬೇಕು. ಈ ಪ್ರಕರಣವನ್ನು ರಾಜಕೀಯಗೊಳಿಸುವುದನ್ನು ತಪ್ಪಿಸಬೇಕು” ಎಂದು ಯೋಗಿ ಆದಿತ್ಯನಾಥ್ ಕರೆ ನೀಡಿದರು.

LEAVE A REPLY

Please enter your comment!
Please enter your name here