
ಕಲ್ಲಡ್ಕ : ಶಿಕ್ಷಣವು ಕೇವಲ ನಾಲ್ಕು ಗೋಡೆಯ ಒಳಗೆ ಪಠ್ಯಪುಸ್ತಕದಿಂದ ಮಾತ್ರ ದೊರೆಯದೆ ನಮ್ಮ ಪರಿಸರದ ಜೊತೆಗೆ ಜೀವನದ ಅನುಭವಗಳ ಕಲಿಕೆಯೂ ಒಂದು ಶಿಕ್ಷಣವಾಗಿದೆ. ಈ ನಿಟ್ಟಿನಲ್ಲಿ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಜೇನು ಕೃಷಿ ಬಗ್ಗೆ ಮಾಹಿತಿಯನ್ನು ಪ್ರಾಯೋಗಿಕವಾಗಿ ತಿಳಿಸಲಾಯಿತು.
ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ ನವೆಂಬರ್ 5 ಗುರುವಾರ ವೀರಕಂಬ ಮಜಿ ಶಾಲೆಯಲ್ಲಿ ಜೇನು ಕೃಷಿಕರಿಗಾಗಿ ಆಯೋಜಿಸಿದ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಮಾಹಿತಿ ನೀಡಲಾಯಿತು.

ಶಾಲೆಯ ಹಳೆ ಕಟ್ಟಡದ ಕೊಠಡಿ ಒಂದರಲ್ಲಿ ಜೇನು ಗೂಡು ಕಟ್ಟಿದ್ದು ಅದನ್ನು ತೆರವು ಮಾಡುವುದೇ ಶಾಲಾ ಶಿಕ್ಷಕರಿಗೆ ಒಂದು ತಲೆನೋವಿನ ಸಂಗತಿಯಾಗಿತ್ತು, ಸುಯೋಗ ಎಂಬಂತೆ ಈ ಸಂದರ್ಭದಲ್ಲಿ ಜೇನು ಕೃಷಿ ಮಾಹಿತಿಯನ್ನು ಶಾಲೆಯಲ್ಲಿ ನಡೆಸಿದ ಕಾರಣ ಶಾಲಾ ಕೊಠಡಿಯಲ್ಲಿ ಗೂಡು ಕಟ್ಟಿದ್ದ ಜೇನು ಗೂಡನ್ನು ತೆರವು ಮಾಡುವುದನ್ನು ಪ್ರಾತ್ಯಕ್ಷತೆ ಮೂಲಕ ಮಕ್ಕಳಿಗೆ ವಿವರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೇನು ಕೃಷಿ ತಜ್ಞರು ವಿದ್ಯಾರ್ಥಿಗಳಿಗೆ ಜೇನಿನ ಜೀವನಕ್ರಮ, ಜೇನು ಕೃಷಿಯ ವಿಧಾನ, ಜೇನು ಪೆಟ್ಟಿಗೆಯ ನಿರ್ವಹಣೆ, ಜೇನು ಸಂಗ್ರಹಣೆಯ ವಿಧಾನ ಹಾಗೂ ಜೇನು ಕೃಷಿಯಿಂದ ದೊರೆಯುವ ಆರ್ಥಿಕ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿಯಲ್ಲಿ ಭಾಗವಹಿಸಿ ಜೇನು ಕೃಷಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ, ಜೀವ ವೈವಿಧ್ಯದ ಮಹತ್ವ ಮತ್ತು ಸ್ವಾವಲಂಬನೆಯ ಕುರಿತು ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.
ವೀರಗಂಬ ಗ್ರಾಮ ಆಡಳಿತ ಅಧಿಕಾರಿ ದಿನೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಬು ಶರ್ಮ, ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ತ ಮಂಡೋನ್ಸಾ,, ಹಿರಿಯ ಶಿಕ್ಷಕಿ ಸಂಗೀತ ಶರ್ಮ, ಜೇನು ಕೃಷಿ ಮಾಹಿತಿ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ವ್ಯಾಪ್ತಿಯ ಜೇನು ಕೃಷಿಕರು ಮೊದಲಾದವರು ಉಪಸ್ಥಿತರಿದ್ದರು
