ಮೂಡುಬಿದಿರೆ: ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿತು. ಶಾಲೆಯ 280ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯೋಗದಲ್ಲಿ ಭಾಗವಹಿಸಿದರು. ಮೂಡುಬಿದಿರೆಯ ಪತಂಜಲಿಯ ಯೋಗ ಶಿಕ್ಷಕರಾದ ಶರತ್ ರವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಂಚಾಲಕರಾದ ಎಂ.ಶಾಂತರಾಮ ಕುಡ್ವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಶಾಂತರಾಮ ಕುಡ್ವರು ಮಾತಾನಾಡಿ ” ಯೋಗವನ್ನು ವಿಶ್ವಕ್ಕೆ ನೀಡಿದ್ದೇ ಭಾರತೀಯರು. ಯೋಗವು ಪುರಾಣ ಕಾಲದಿಂದಲೂ ಭಾರತದಲ್ಲಿ ಪ್ರಚಲಿತದಲ್ಲಿತ್ತು. ರಾಮಾಯಣ, ಮಹಾಭಾರತ, ಭಗವದ್ಗೀತೆಗಳಲ್ಲೂ ಯೋಗದ ಉಲ್ಲೇಖ ಇದೆ. ಅಗಸ್ತ್ಯ ಮಹರ್ಷಿಗಳು ಯೋಗವನ್ನು ಭಾರತ ದೇಶದಲ್ಲೆಡೇ ಪ್ರಚಾರಗೊಳಿಸಿದ ಉಲ್ಲೇಖ ಪುರಾಣಗಳಲ್ಲಿದೆ. 2014 ರಲ್ಲಿ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ವಿಶ್ವಸಂಸ್ಥೆಯಲ್ಲಿ ಜೂನ್ 21 ಅತ್ಯಂತ ದೀರ್ಘ ಹಗಲನ್ನು ಹೊಂದಿರುವ ಕಾರಣ, ಪ್ರತೀವರ್ಷ ಜೂನ್ 21 ನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಬೇಕು ಎಂಬ ಪ್ರಸ್ತಾಪ ಇಟ್ಟಾಗ 175 ದೇಶಗಳು ಈ ಪ್ರಸ್ತಾಪವನ್ನು ಬೆಂಬಲಿಸಿದವು. ಆ ನಿರ್ಣಯದಂತೆ 2015 ರಿಂದ ಜೂನ್ 21 ಅಂತರರಾಷ್ಟ್ರೀಯ ಯೋಗ ದಿನವಾಗಿ ವಿಶ್ವದಲ್ಲೆಡೆ ಆಚರಿಸಲಾಗುತ್ತಿದೆ” ಎಂದರು.

ಪತಂಜಲಿಯ ಯೋಗ ಶಿಕ್ಷಣದ ತಾಲೂಕು ಮಹಿಳಾ ಪ್ರಭಾರಿ ಸವಿತಾರವರು, ನಶಾಮುಕ್ತ ಭಾರತ ನಿರ್ಮಾಣದ ಸಂಕಲ್ಪ ತೊಡುವ ಪ್ರತಿಜ್ಞೆ ಬೋಧಿಸಿದರು. ಯೋಗ ಅಭ್ಯಾಸಿಗಳಾದ ಪವಿತ್ರಾ , ಜ್ಯೋತಿ ಹಾಗೂ ಶಾಲಾ ಮುಖ್ಯ ಮಾತಾಜಿ ವತ್ಸಲಾ ರಾಜೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವತ್ಸಲಾ ರಾಜೇಶ್ ರವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ನಂತರ ಧನ್ಯವಾದ ಸಲ್ಲಿಸಿದರು.
ನಂತರದಲ್ಲಿ ಶಾಲಾ ಮೈದಾನದಲ್ಲಿ 280 ವಿದ್ಯಾರ್ಥಿಗಳಿಂದ ಪಾರಂಪರಿಕ ಯೋಗಾಭ್ಯಾಸ ನಡೆಯಿತು. ಯೋಗ ಶಿಕ್ಷಕರಾದ ಶರತ್ ರವರ ಮಾರ್ಗದರ್ಶನದಲ್ಲಿ ಪವಿತ್ರಾ ಹಾಗೂ ಜ್ಯೋತಿಯವರು ವಿದ್ಯಾರ್ಥಿಗಳಿಂದ ಯೋಗಾಸನ ಮಾಡಿಸಿದರು.


